ಬೆಳಗಾವಿ: ಯಡಿಯೂರಪ್ಪ ತಮ್ಮ ಆರೋಗ್ಯದ ಕಾರಣಕ್ಕಾಗಿ ಅಧಿಕಾರ ತ್ಯಾಗ ಮಾಡಿದರು, ಅವರ ಸಹಮತದಿಂದ ಬೊಮ್ಮಾಯಿ ಸಿಎಂ ಆಗಿದ್ದಾರೆ. ಬೊಮ್ಮಾಯಿ ಅತ್ಯಂತ ಸರಳ, ಸಜ್ಜನಿಕೆಯ ವ್ಯಕ್ತಿಯಾಗಿದ್ದಾರೆ. ಯಡಿಯೂರಪ್ಪ ಅವರನ್ನು ಇಡೀ ಕರ್ನಾಟಕ ಸನ್ಮಾನವನ್ನ ಮಾಡಬೇಕು. ಯಡಿಯೂರಪ್ಪ ಕರ್ನಾಟಕಕ್ಕೆ ಮಾಡಿದ ಸೇವೆ ಬಿಜೆಪಿ ಎಂದಿಗೂ ಮರೆಯಲ್ಲ, ಅವರನ್ನು ಸಂಸದೀಯ ಮಂಡಳಿಯ ಸದಸ್ಯರನ್ನಾಗಿ ಮಾಡಿದ್ದೇವೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದರು.
ಬೆಳಗಾವಿಯ ಖಾನಾಪುರ ನಂದಗಢ ಬಿಜೆಪಿ ಪಕ್ಷದಿಂದ ಆಯೋಜಿಸಿದ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಪೂರ್ಣ ಪ್ರಮಾಣದ ಸರ್ಕಾರ ರಚನೆ ಆಗಬೇಕು ಎಂಬುದು ಯಡಿಯೂರಪ್ಪ ಅವರ ಇಚ್ಚೆಯಾಗಿದೆ. ಅಲ್ಲದೇ ಕರ್ನಾಟಕವನ್ನು ದಕ್ಷಿಣ ಭಾರತದ ನಂಬರ್ ಒನ್ ರಾಜ್ಯ ಮಾಡುವುದು ಬಿಜೆಪಿಯ ಗುರಿ ಎಂದು ರಾಜನಾಥ ಸಿಂಗ್ ಹೇಳಿದರು. ಮೋದಿ ಶಿವಮೊಗ್ಗದ ಸುಂದರ ಏರ್ಪೋರ್ಟ್ ಉದ್ಘಾಟನೆ ಮಾಡಿದ್ದಾರೆ. ಏರ್ ಅಷ್ಟೇ ಅಲ್ಲ ರೋಡ್ ಸಂಪರ್ಕದಲ್ಲಿ ಸರ್ಕಾರ ಅದ್ಭುತ ಕೆಲಸ ಮಾಡಿದೆ. 50ವರ್ಷದಲ್ಲಿ ಕಾಂಗ್ರೆಸ್ ಮಾಡದ ಕೆಲಸ 9 ವರ್ಷದಲ್ಲಿ ಬಿಜೆಪಿ ಸರ್ಕಾರ ಮಾಡಿದೆ ಎಂದು ಗುಣಗಾನ ಮಾಡಿದರು.
ಕಾಂಗ್ರೆಸ್ ಹೇಳುವುದು ಒಂದು ಮಾಡುವುದು ಇನ್ನೊಂದು:ರಸ್ತೆಗಳ ನಿರ್ಮಾಣಕ್ಕೆ ಸರ್ಕಾರ ಮಹತ್ವದ ಕೆಲಸ ಮಾಡಿದೆ ಕರ್ನಾಟಕದಲ್ಲಿ ಹೆಲಿಕಾಪ್ಟರ್ ಸಿದ್ದಪಡಿಸುವ ಕಾರ್ಖಾನೆ ಆರಂಭವಾಗಿದೆ. ಇಂಡಸ್ಟ್ರೀಸ್ ಕಾರಿಡಾರ್ ಮೂಲಕ ರಾಜ್ಯದ ಯುವಕರು ಉದ್ಯೋಗ ಕೊಂಡುಕೊಂಡಿದ್ದಾರೆ. ಕರ್ನಾಟಕದಲ್ಲಿ ಮೂರು ಇಂಡಸ್ಟ್ರೀಸ್ ಕಾರಿಡಾರ್ ಮಾಡಲಾಗಿದೆ. ಅಲ್ಲದೇ ಮನೆ ಮತ್ತು ಜಮೀನಿಗೆ ನೀರು ಕೊಡುವ ಯೋಜನೆ ರೂಪಿಸಲಾಗಿದೆ. ಕಾಂಗ್ರೆಸ್ ಹೇಳವುದು ಒಂದು, ಮಾಡೋದು ಇನ್ನೊಂದು. ಆದರೇ ಬಿಜೆಪಿ ನುಡಿದಂತೆ ನಡೆಯುವ ಪಕ್ಷ ವಾಗಿದೆ ಎಂದು ಹೇಳಿದರು. ಪ್ರಾಣ ಬಿಟ್ಟೆವು ವಚನ ಬಿಡಲ್ಲ ಎಂಬುದು ನಮ್ಮ ಘೋಷಣೆ ಎಂದು ರಾಜನಾಥ ಸಿಂಗ್ ಇದೇ ವೇಳೆ ಹೇಳಿದರು.
ಕಾಶ್ಮೀರದ ಕಲಂ 370 ರದ್ದು ಪಡಿಸಲಾಗಿದೆ, ತ್ರೀಬಲ್ ತಲಾಕ್ ನಿಷೇಧಿಸಲಾಗಿದೆ, ಭದ್ರಾ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಚಿತ್ರದುರ್ಗ, ತುಮಕೂರು ಜಿಲ್ಲೆಗೆ ಇದರಿಂದ ಲಾಭ ಆಗಿದೆ. ಜಲ್ ಜೀವನ್ ಮಷೀನ್ ಮೂಲಕ ಜನರಿಗೆ ಶುದ್ಧ ನೀರು ಕೊಡಲಾಗಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರುತ್ತೇವೆ ಎಂದು ಸಂಕಲ್ಪ ಮಾಡಿ. ಯಾತ್ರೆಗೆ ಬೆಳಗಾವಿಯನ್ನು ಯೋಚಿಸಿ ಆಯ್ಕೆ ಮಾಡಲಾಗಿದೆ. ಬೆಳಗಾವಿ ಕರ್ನಾಟಕದ ಶಿರ ಇದ್ದ ಹಾಗೇ ಎಂದು ಸಚಿವರು ಹೇಳಿದರು.