ಬೆಳಗಾವಿ: ತೋಟಗಾರಿಕೆ ಇಲಾಖೆಯ ಅಧಿಕಾರಿ ರಾಜಕುಮಾರ ಟಾಕಳೆ ಮತ್ತು ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ ನಡುವೆ ಆರೋಪ-ಪ್ರತ್ಯಾರೋಪ ಮುಂದುವರಿದಿದೆ. ಒಂದೆಡೆ ನವ್ಯಶ್ರೀ ಬೆದರಿಕೆ ಹಾಕುತ್ತಿದ್ದಾರೆ ಎಂದು ಅಧಿಕಾರಿ ಟಾಕಳೆ ಪೊಲೀಸರಿಗೆ ದೂರು ನೀಡಿದ್ರೆ, ಇನ್ನೊಂದೆಡೆ ಟಾಕಳೆ ಅವರೇ ನನ್ನ ಗಂಡ ಎಂದು ನವ್ಯಶ್ರೀ ಹೇಳಿದ್ದಾರೆ. ಇದೆಲ್ಲದರ ನಡುವೆ ಟಾಕಳೆ, ನವ್ಯಶ್ರೀ ಮತ್ತು ಅವರ ಆಪ್ತ ತಿಲಕ್ ನಡುವೆ ನಡೆದ ಮಾತುಕತೆ ಎನ್ನಲಾದ ಆಡಿಯೋ ಕೂಡ ನವ್ಯಶ್ರೀ ಬಿಡುಗಡೆ ಮಾಡಿದ್ದಾರೆ. ಇದಕ್ಕೆ ರಾಜಕುಮಾರ್ ಟಾಕಳೆ ಪ್ರತಿಕ್ರಿಯಿಸಿ, ಕೆಲ ಆರೋಪಗಳನ್ನು ಮಾಡಿದ್ದಾರೆ.
"ನಾಲ್ಕು ವರ್ಷಗಳಿಂದ ನವ್ಯಶ್ರೀ ನನಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. 50 ಲಕ್ಷ ರೂ ಹಣಕ್ಕೆ ಅವರು ಬೇಡಿಕೆ ಇಟ್ಟಿದ್ದರು. ಈಗಾಗಲೇ 2 ಲಕ್ಷ ಹಣವನ್ನು ಡಿಡಿ ಮೂಲಕವೂ 3 ಲಕ್ಷ ರೂ. ಕ್ಯಾಶ್ ಮೂಲಕ ಪಡೆದುಕೊಂಡಿದ್ದಾರೆ. ನನ್ನ ಪತ್ನಿಯ ಸಹಕಾರದಿಂದ ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದೇನೆ" ಎಂದು ಅವರು ತಿಳಿಸಿದರು.
"5-6 ತಿಂಗಳಿಂದ ಬ್ಲ್ಯಾಕ್‌ಮೇಲ್ ನಡೆಯುತ್ತಿದೆ. ನಾನು ಅವರ ಪತಿ ಎಂದು ನವ್ಯಶ್ರೀ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದರು. ನಂತರ ಕೇವಲ ಹಣಕಾಸಿನ ವ್ಯವಹಾರ ಇದೆ ಎಂದು ಹೇಳಿದ್ದಾರೆ. ಇದಾದ ಬಳಿಕ ಮತ್ತೆ 50 ಲಕ್ಷ ರೂ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಹಿಂದು ವಿವಾಹ ಪದ್ಧತಿಯ ಪ್ರಕಾರ ಎರಡನೇ ಮದುವೆ ಆಗಲು ಅವಕಾಶವಿಲ್ಲ. ನನ್ನ ಮದುವೆ ವಿಚಾರ ತಿಳಿದು ನವ್ಯಶ್ರೀ ಈಗ ನಾನೇ ಅವರ ಪತಿ ಎನ್ನುವ ಮೂಲಕ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ" ಎಂದರು.