ಚಿಕ್ಕೋಡಿ:ಎಡೆಬಿಡದೆ ಸುರಿಯುತ್ತಿರುವ ಮಳೆಗೆ ರೈತರು ಬೇಸತ್ತು ಹೋಗಿದ್ದು, ವರುಣನ ರುದ್ರನರ್ತನಕ್ಕೆ ಮೆಕ್ಕೆಜೋಳ ಹಾಳಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರುವಷ್ಟರಲ್ಲಿ ಮಳೆನೀರಿನ ಪಾಲಾಗಿದೆ.
ಚಿಕ್ಕೋಡಿ: ರಾಶಿಗೆ ಬಂದ ಮೆಕ್ಕೆಜೋಳ ಮಳೆನೀರು ಪಾಲು - ಮೆಕ್ಕೆಜೋಳ ಬೆಳೆ ನಾಶ
ಬೆಳಗಾವಿ ಜಿಲ್ಲೆಯಾದ್ಯಂತ ಸುರಿದ ಭಾರಿ ಮಳೆಗೆ ತೆನೆ ಬಿಟ್ಟಿದ್ದ ಮೆಕ್ಕೆಜೋಳ ಸಂಪೂರ್ಣ ಹಾಳಾಗಿದ್ದು, ಜೋಳ ಬೆಳೆದ ರೈತರು ತಲೆ ಮೇಲೆ ಕೈ ಹೊತ್ತು ಕೂರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ಕಾಗವಾಡ, ಅಥಣಿ, ರಾಯಬಾಗ ಭಾಗದಲ್ಲಿ ಅತಿ ಹೆಚ್ಚಾಗಿ ಮೆಕ್ಕೆಜೋಳ ಬೆಳೆಯುತ್ತಾರೆ. ಇನ್ನೇನು ಬೆಳೆದ ಬೆಳೆ ಕೈಗೆ ಬಂದಾಯಿತು, ಇನ್ನು ಬೆಳೆ ರಾಶಿ ಮಾಡಿ ಮಾರುಕಟ್ಟೆಗೆ ಸಾಗಿಸಿ ಹಣ ಎಣಿಸಬೇಕು ಅನ್ನುವಷ್ಟರಲ್ಲಿ ರೈತನಿಗೆ ಈ ಕುಂಭದ್ರೋಣ ಮಳೆಯಿಂದಾಗಿ ಮತ್ತೆ ತೊಂದರೆ ಎದುರಾಗಿದೆ.
ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದ ಬಾಳಪ್ಪ ಶಿವರಾಯಿ ಜಿಡ್ಡಿಮನಿ ಎಂಬ ರೈತ ಎರಡು ಎಕೆರೆ ಜಮೀನಿನಲ್ಲಿ ಬೆಳೆದ ಗೋವಿನಜೋಳ ಸತತವಾಗಿ ಸುರಿಯುತ್ತಿರುವ ಮಳೆಗೆ ಬಲಿಯಾಗಿ ಸಂಪೂರ್ಣ ನಾಶವಾಗಿದೆ. ಈ ಬೆಳೆ ನಂಬಿ ಸಾಲ ಮಾಡಿದ ಇವರಿಗೆ ದಿಕ್ಕು ತೋಚದಂತಾಗಿದೆ. ಸುಮಾರು 30,000 ಗೋವಿನಜೋಳ ಬೆಳೆ ನಷ್ಟವಾಗಿದೆ. ಹೀಗಾಗಿ ಯುವ ಉತ್ಸಾಹಿ ರೈತರು ಮಳೆಯ ಆರ್ಭಟಕ್ಕೆ ಬೆಚ್ಚಿ ಬಿದ್ದಿದ್ದು ಕೃಷಿ ಮೇಲೆ ಇರುವ ವಿಶ್ವಾಸ ಕಳೆದುಕೊಳ್ಳುವ ಸನ್ನಿವೇಶ ಎದುರಾಗಿದೆ.