ಮಳೆ ಮಾಯ, ಗದ್ದೆಗಳಲ್ಲಿ ಬಿರುಕು ಬೆಳಗಾವಿ: ಒಂದೆಡೆ ಮಳೆ ಆಗುತ್ತಿಲ್ಲ. ಮತ್ತೊಂದೆಡೆ, ಸಮರ್ಪಕ ವಿದ್ಯುತ್ ಪೂರೈಕೆ ಇಲ್ಲ. ಇದರಿಂದಾಗಿ ಸಾಲ ಮಾಡಿ ಭತ್ತ ಬೆಳೆದ ರೈತರನ್ನು ಬೆಳೆಹಾನಿ ಭೀತಿ ಕಾಡುತ್ತಿದೆ. ಮಳೆ ಸುರಿಸದ ಮಳೆರಾಯನ ವಿರುದ್ಧ ಕೋಪಗೊಂಡಿರುವ ರೈತರು ಲೋಡ್ ಶೆಡ್ಡಿಂಗ್ ಮಾಡುತ್ತಿರುವ ಸರ್ಕಾರದ ವಿರುದ್ಧವೂ ಹಿಡಿಶಾಪ ಹಾಕುತ್ತಿದ್ದಾರೆ.
ನೀರಿಲ್ಲದೇ ಭತ್ತದ ಗದ್ದೆ ಬಿರುಕು ಬಿಡುತ್ತಿದೆ. ಒಣಗುವ ಸ್ಥಿತಿ ತಲುಪಿವೆ ನಾಟಿ ಮಾಡಿರುವ ಭತ್ತದ ಸಸಿಗಳು. ಮಳೆಗಾಗಿ ಆಕಾಶದತ್ತ ಮುಖಮಾಡಿ ಅನ್ನದಾತ ಕುಳಿತಿದ್ದಾನೆ. ಇಂಥ ದೃಶ್ಯಗಳು ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದ ಅಪ್ಪಯ್ಯ ದೇಸಾಯಿ ಎಂಬವರ ಹೊಲದಲ್ಲಿ ಕಂಡುಬಂತು.
ಕಡೋಲಿ ಗ್ರಾಮದ 2,400 ಎಕರೆ ಪ್ರದೇಶದ ಪೈಕಿ ಅಂದಾಜು 1,500 ಎಕರೆ ಭೂಮಿಯಲ್ಲಿ ಭತ್ತ ಬೆಳೆಯಲಾಗಿದೆ. ಇದರಲ್ಲಿ 1 ಸಾವಿರ ಎಕರೆ ಭೂಮಿಯಲ್ಲಿ ಮಳೆ ಕೊರತೆಯಿಂದಾಗಿ ಗದ್ದೆಗಳು ಬಿರುಕು ಬಿಟ್ಟಿವೆ. 20 ದಿನಗಳ ಹಿಂದೆ ನಾಟಿ ಮಾಡಿದ್ದ ಭತ್ತದ ಸಸಿಗಳು ಭೂಮಿಯಿಂದ ಆರು ಇಂಚು ಮೇಲೆ ಬಂದಿವೆ. ಈಗ ನೀರಿಗಾಗಿ ಅವು ಬಾಯಿ ಬಿಡುವಂತಾಗಿದೆ.
ಬೋರ್‌ವೆಲ್ ಮತ್ತು ಬಾವಿ ಇದ್ದವರು ನೀರು ಹಾಯಿಸಿ ಬೆಳೆ ಬದುಕಿಸಬೇಕೆಂದರೂ ಸಮರ್ಪಕ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಇದರಿಂದಾಗಿ ಮಳೆಗಾಗಿ ಕೆಲವು ರೈತರು ಆಕಾಶದತ್ತ ಪ್ರಾರ್ಥಿಸುತ್ತಾ ಕುಳಿತರೆ, ಮತ್ತೊಂದಿಷ್ಟು ರೈತರು ಸರಿಯಾಗಿ ವಿದ್ಯುತ್ ನೀಡುವಂತೆ ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ.
ಈಟಿವಿ ಭಾರತದ ಜೊತೆ ಮಾತನಾಡಿದ ರೈತ ಅಪ್ಪಾಸಾಹೇಬ ದೇಸಾಯಿ, "ಈ ವರ್ಷದಲ್ಲಿ ಭತ್ತ ಬೆಳೆದಿರುವ ರೈತರ ಸ್ಥಿತಿ ಬಹಳಷ್ಟು ಚಿಂತಾಜನಕವಾಗಿದೆ. ಮಳೆಯಾಗದಿದ್ದರೆ ನಾಲ್ಕು ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆ ಇದೆ. ಮಳೆ ಕೊರತೆಯಿಂದ ಮಾರ್ಕಂಡೇಯ ನದಿ ತುಂಬಿಲ್ಲ. ಬೋರ್‌ವೆಲ್ ಮತ್ತು ಬಾವಿ ನೀರು ಕಡಿಮೆ ಆಗಿದೆ. ಮಳೆಯಾದರೆ ಮಾತ್ರ ಹೊಲದಲ್ಲಿ ಬೆಳೆದಿರುವ ಭತ್ತ ಉಳಿಯಲು ಸಾಧ್ಯ" ಎಂದರು.
ರೈತ ಅಪ್ಪಯ್ಯ ದೇಸಾಯಿ ಪ್ರತಿಕ್ರಿಯಿಸಿ, "ಈ ವರ್ಷ ಸರಿಯಾಗಿ ಮಳೆಯಾಗಿಲ್ಲ. ಬೋರ್ವೆಲ್ನಿಂದ ನೀರು ಹಾಯಿಸಬೇಕು ಎಂದರೆ ಸಮರ್ಪಕ ವಿದ್ಯುತ್ ಪೂರೈಕೆ ಆಗುತ್ತಿಲ್ಲ. 80 ಸಾವಿರ ರೂ. ಖರ್ಚು ಮಾಡಿ ನಾಲ್ಕು ಎಕರೆಯಲ್ಲಿ ಭತ್ತ ಬೆಳೆದಿದ್ದೇನೆ. ಈಗ ನೋಡಿದರೆ ಮಳೆ ಕೈ ಕೊಟ್ಟಿದೆ. ಏನು ಮಾಡಬೇಕೆಂದೇ ಗೊತ್ತಾಗುತ್ತಿಲ್ಲ. ಸರ್ಕಾರ ದಯವಿಟ್ಟು, ಬಾವಿ ಮೋಟರ್ಗಳಿಗೆ ಕರೆಂಟ್ ಕೊಡಬೇಕು" ಎಂದು ಮನವಿ ಮಾಡಿದರು.
ಶೇ 46ರಷ್ಟು ಮಳೆ ಕೊರತೆ: ಬೆಳಗಾವಿ ಜಿಲ್ಲೆಯಲ್ಲಿ ಜೂನ್‌ನಿಂದ ಆಗಸ್ಟ್ ತಿಂಗಳವರೆಗೆ 432 ಮಿ.ಮೀ ಮಳೆಯಾಗಬೇಕಿತ್ತು. ಆದರೆ 386 ಮಿ.ಮೀ ಮಾತ್ರ ಮಳೆಯಾಗಿದೆ. ಇದರ ಪರಿಣಾಮ ಶೇ.46ರಷ್ಟು ಮಳೆ ಕೊರತೆಯಾಗಿದೆ. ಇದು ಜಿಲ್ಲೆಯ ರೈತರನ್ನು ಚಿಂತೆಗೀಡು ಮಾಡಿದೆ.
ಶೇ.87ರಷ್ಟು ಮಾತ್ರ ಬಿತ್ತನೆ: ಪ್ರಸಕ್ತ ವರ್ಷದ ಮುಂಗಾರಿನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ 7 ಲಕ್ಷ 10 ಸಾವಿರದ 532 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿತ್ತು. ಮುಂಗಾರು ಮಳೆ ವಿಳಂಬವಾಗಿದ್ದರಿಂದ 6 ಲಕ್ಷ 18 ಸಾವಿರದ 347 ಹೆಕ್ಟೇರ್ ಜಮೀನಿನಲ್ಲಿ ಮಾತ್ರ ಬಿತ್ತನೆ ಮಾಡಲಾಗಿದೆ. ಕಳೆದ ಸಾಲಿಗಿಂತ ಶೇ.11ರಷ್ಟು ಬಿತ್ತನೆ ಕಡಿಮೆಯಾಗಿದೆ. ಈಗ ಧೈರ್ಯ ಮಾಡಿ ಬಿತ್ತಿದ್ದ ರೈತರು ಬೆಳೆ ಹಾನಿ ಭೀತಿ ಅನುಭವಿಸುತ್ತಿದ್ದು, ಸರ್ಕಾರ ಕೂಡಲೇ ಜಿಲ್ಲೆಯನ್ನು 'ಬರಗಾಲ ಪೀಡಿತ' ಎಂದು ಘೋಷಿಸಬೇಕು ಎಂದು ರೈತರು ಮನವಿ ಮಾಡಿದ್ದಾರೆ.
ಇದನ್ನೂಓದಿ:Gruha lakshmi scheme: ಮೈಸೂರಿನಲ್ಲಿ ಆಗಸ್ಟ್ 30ರಂದು 'ಗೃಹಲಕ್ಷ್ಮಿ' ಯೋಜನೆಗೆ ಚಾಲನೆ - ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್