ಬೆಳಗಾವಿ: ಸಾರ್ವಜನಿಕರ ಸೇವೆಗಾಗಿ ಇಡೀ ದೇಶಾದ್ಯಂತ 15 ಜೋಡಿ ರೈಲುಗಳನ್ನು ಆರಂಭಿಸಲಾಗುತ್ತಿದ್ದು, ಜನರು ಸುರಕ್ಷಿತವಾಗಿ ಪ್ರಯಾಣಿಸುವ ಮೂಲಕ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಇಂದು ರೈಲ್ವೆ ಇಲಾಖೆ ಮಂತ್ರಿಗಳಾದ ಪಿಯೂಷ್ ಗೋಯಲ್ ಜೊತೆಗೆ ಚರ್ಚೆ ನಡೆಸಿದ ಬಳಿಕ 15 ರೈಲುಗಳನ್ನು ಬಿಡಲು ನಿರ್ಧಾರ ಕೈಗೊಳ್ಳಲಾಗಿದೆ. ದೇಶದಲ್ಲಿ ಸಂಚರಿಸುವ ಎಲ್ಲ ರೈಲುಗಳಿಗೂ ಸ್ಯಾನಿಟೈಸರ್ ಮಾಡಲಾಗುತ್ತದೆ. ಸಾರ್ವಜನಿಕರು ಕೂಡ ತಮ್ಮ ಸುರಕ್ಷತೆಗಾಗಿ ಸಾಮಾಜಿಕ ಅಂತರ ಕಾಪಾಡಿಕೊಂಡು ಪ್ರಯಾಣಿಸಬೇಕಿದೆ ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುರೇಶ್ ಅಂಗಡಿ ಇನ್ನು ರೈಲಿನಲ್ಲಿ ಏರ್ ಕಂಡಿಷನ್ ಬೋಗಿಗಳು ಮಾತ್ರ ಇರಲಿದ್ದು, ಸಾಮಾನ್ಯ ಹಾಗೂ ಆರ್ಡಿನರಿ ಬೋಗಿಗಳು ಇರುವುದಿಲ್ಲ. ರೈಲು ಟಿಕೆಟ್ಗಳನ್ನು ಆನ್ಲೈನ್ನಲ್ಲಿ ಮಾತ್ರ ತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಯಾವುದೇ ಕಾರಣಕ್ಕೂ ರೈಲ್ವೆ ನಿಲ್ದಾಣಗಳಲ್ಲಿ ಟಿಕೆಟ್ ನೀಡಲಾಗುವುದಿಲ್ಲ. ಹೀಗಾಗಿ ಜನರು ಸಂಯಮದಿಂದ ವರ್ತಿಸಬೇಕು ಎಂದರು.
ಮೆಟ್ರೋ ಸಂಚಾರ ಆಯಾ ರಾಜ್ಯಗಳಿಗೆ ಸಂಬಂಧಿಸಿದ ವಿಚಾರ, ಹಾಗಾಗಿ ರಾಜ್ಯಗಳೇ ಈ ಕುರಿತು ನಿರ್ಧಾರ ತೆಗೆದುಕೊಳ್ಳಬೇಕು. ಈಗ ಬಿಟ್ಟಿರುವ ರೈಲುಗಳ ಆಗು ಹೋಗುಗಳನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ರೈಲುಗಳನ್ನು ಬಿಡುವ ಕುರಿತು ಚರ್ಚೆ ನಡೆಸಲಾಗುವುದು ಎಂದರು.