ಬೆಳಗಾವಿ :ಕೇಂದ್ರ ಸರ್ಕಾರದ ಕೃಷಿ ನೀತಿ ಜಾರಿ ಖಂಡಿಸಿ ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ ನೇತೃತ್ವದಲ್ಲಿ ರೈಲು ತಡೆಗೆ ಆಗಮಿಸಿದ್ದ ರೈತರ ಪ್ರಯತ್ನವನ್ನು ಪೊಲೀಸರು ವಿಫಲಗೊಳಿಸಿದರು.
ನಗರದ ಕೇಂದ್ರ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ರೈತರನ್ನು ಗೇಟ್ ಬಳಿಯೇ ಪೊಲೀಸರು ತಡೆದರು. ರೈತರ ನ್ಯಾಯಯುತ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಈ ವೇಳೆ ಬಾಬಾಗೌಡ ಪಾಟೀಲ ಆರೋಪಿಸಿದರು. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿದ ರೈತರು, ಕೃಷಿ ಕಾನೂನುಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿಯಲ್ಲಿ ರೈತರಿಂದ ರೈಲು ತಡೆಗೆ ವಿಫಲ ಯತ್ನ ಓದಿ : ಸಾಂಕೇತಿಕವಾಗಿ ರೈಲು ತಡೆ ನಡೆಸುವಲ್ಲಿ ಯಶಸ್ವಿಯಾದ ರೈತರು
ರೈಲು ತಡೆಗೆ ಅವಕಾಶ ನಿರಾಕರಿಸಿದಾಗ, ರೈಲ್ವೆ ನಿಲ್ದಾಣದ ಮುಂಭಾಗದ ರಸ್ತೆಯಲ್ಲಿ ಕುಳಿತು ರೈತರು ಪ್ರತಿಭಟನೆ ಮುಂದುವರೆಸಿದರು. ರಸ್ತೆ ತಡೆದು ಪ್ರತಿಭಟನೆ ನಡೆಸಿದ ಕಾರಣ ಕೆಲ ಹೊತ್ತು ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತಾಯಿತು. ಪ್ರತಿಭಟನೆ ಕೈಬಿಡುವಂತೆ ಪೊಲೀಸರು ರೈತರಿಗೆ ಮನವಿ ಮಾಡಿದರು. ಪೊಲೀಸರ ಮನವಿಗೆ ಮನ್ನಣೆ ನೀಡದ ರೈತರು ಪ್ರತಿಭಟನೆ ಮುಂದುವರೆಸಿದರು. ಈ ವೇಳೆ ಬಾಬಾಗೌಡ ಪಾಟೀಲ ಸೇರಿದಂತೆ ಅಖಂಡ ಕರ್ನಾಟಕ ರೈತ ಸಂಘದ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು. ವಶಕ್ಕೆ ಪಡೆದ ರೈತರನ್ನು ಕ್ಯಾಂಪ್ ಠಾಣೆಗೆ ಕರೆದೊಯ್ದು, ಬಳಿಕ ಬಿಡುಗಡೆಗೊಳಿಸಲಾಯಿತು. ಮುನ್ನೆಚ್ಚರಿಕಾ ಕ್ರಮವಾಗಿ ನೂರಕ್ಕೂ ಅಧಿಕ ರೈಲ್ವೆ ಹಾಗೂ ನಗರ ಪೊಲೀಸರು ರೈಲ್ವೆ ನಿಲ್ದಾಣದಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದರು.