ಬೆಳಗಾವಿ: ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಬ್ಬರು ಜನಪ್ರಿಯ ನಾಯಕರು. ಸಿದ್ದರಾಮಯ್ಯ ನಮ್ಮ ಕ್ಷೇತ್ರಕ್ಕೆ ಬರಲಿ ಅನ್ನುವುದು ಹಲವು ಕ್ಷೇತ್ರಗಳಲ್ಲಿನ ಜನರಿಂದ ಬೇಡಿಕೆ ಇದೆ. ಡಿ.ಕೆ. ಶಿವಕುಮಾರ್ಗೆ ಸಹ ಕನಕಪುರ ಬೇಡ. ಬೇರೆ ಕ್ಷೇತ್ರದಿಂದ ಸ್ಪರ್ಧಿಸಲಿ ಎಂಬ ಬೇಡಿಕೆಯೂ ಇದೆ. ಈ ನಿರ್ಧಾರವನ್ನು ಅವರಿಬ್ಬರಿಗೂ ಬಿಟ್ಟಿದ್ದೇವೆ. ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕೆನ್ನುವ ವಿಚಾರವನ್ನೂ ಅವರಿಗೆ ಬಿಟ್ಟಿದ್ದೇವೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಹೇಳಿದರು.
ನಗರದಲ್ಲಿ ಭಾನುವಾರ ಮಾಧ್ಯಮದವರ ಜತೆಗೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕೋಲಾರ ಕ್ಷೇತ್ರ ಸೇಫ್ ಅಲ್ಲವಾ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ವರದಿ ಸುಳ್ಳು. ಇದನ್ನು ನಾನು ಅಲ್ಲಗಳೆಯುತ್ತೇನೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ನಾಯಕರು ಒಂದಾಗಿ ಕುಳಿತು ಚರ್ಚಿಸುತ್ತೇವೆ. ಬಹಳ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ, ಡಿಕೆಶಿ ಬಂದು ಸ್ಪರ್ಧಿಸಬೇಕೆಂಬ ಬೇಡಿಕೆ ಇದೆ. ಅತಿ ಶೀಘ್ರವೇ ಈ ಕುರಿತಾಗಿ ಘೋಷಣೆ ಮಾಡ್ತೇವೆ. ಈ ವಿಷಯದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಶಿಗ್ಗಾಂವಿಯಿಂದ ಸ್ಪರ್ಧೆಗೆ ಸಿ ಎಂ ಬಸವರಾಜ ಬೊಮ್ಮಾಯಿ ಮೀನಮೇಷ- ಸುರ್ಜೇವಾಲಾ: ನಾವೇನೂ ಸಿಎಂ ಬಸವರಾಜ ಬೊಮ್ಮಾಯಿ ರೀತಿ ಶಿಗ್ಗಾಂವಿಯಿಂದ ಸ್ಪರ್ಧಿಸಲೋ ಬೇಡವೋ? ಅಥವಾ ಕಾಂಗ್ರೆಸ್ವೂ ಯಾರನ್ನು ಅಭ್ಯರ್ಥಿ ಮಾಡ್ತಾರೆ ಅಂತೆಲ್ಲ ಯೋಚಿಸುತ್ತಿಲ್ಲ. ಬಿಜೆಪಿಯವರು ಇನ್ನೂ ಅಭ್ಯರ್ಥಿಗಳ ಬಗ್ಗೆ ಚರ್ಚೆಯೂ ನಡೆಸಿಲ್ಲ. ನಾವು ಅರ್ಧದಷ್ಟು ಕ್ಷೇತ್ರಗಳ ಅಭ್ಯರ್ಥಿಗಳನ್ನು ಫೈನಲ್ ಮಾಡಿದ್ದೇವೆ. ಅಧಿಕಾರಕ್ಕಾಗಿ ಹೋರಾಡುತ್ತಿಲ್ಲ, ಅಭಿವೃದ್ಧಿಗಾಗಿ ಹೋರಾಡುತ್ತಿದ್ದೇವೆ ಎಂದು ತಿಳಿಸಿದರು.