ಕರ್ನಾಟಕ

karnataka

ETV Bharat / state

ನಮಗೆ 150 ಸೀಟ್ ಬರದಿದ್ದರೆ ನಮ್ಮ ಶಾಸಕರನ್ನು ಬಿಜೆಪಿ ಕದಿಯುತ್ತದೆ: ರಾಹುಲ್ ಗಾಂಧಿ ವಾಗ್ದಾಳಿ - ನೋಟ್ ಬ್ಯಾನ್ ಮತ್ತು ಜಿಎಸ್​ಟಿ

ರಾಹುಲ್​​ ಗಾಂಧಿ ಅವರು ಇಂದು ಯಮಕನಮರಡಿ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಸತೀಶ್​ ಜಾರಕಿಹೊಳಿ ಪರ ಪ್ರಚಾರ ನಡೆಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

rahul-gandhi-lashed-out-at-bjp-in-belgaum
ನಮಗೆ 150 ಸೀಟ್ ಬರದಿದ್ರೆ ನಮ್ಮ ಶಾಸಕರನ್ನು ಬಿಜೆಪಿ ಕದಿಯುತ್ತದೆ: ರಾಹುಲ್ ಗಾಂಧಿ ವಾಗ್ದಾಳಿ

By

Published : May 6, 2023, 6:56 PM IST

ಬೆಳಗಾವಿ:ಈ ಬಾರಿ ನಾವು ಕರ್ನಾಟಕದಲ್ಲಿ 150 ಸೀಟ್ ಗೆಲ್ಲಲೇಬೇಕು. ಇಲ್ಲದಿದ್ದರೆ ನಮ್ಮವರನ್ನು ಕದ್ದು ಮತ್ತೆ ಬಿಜೆಪಿಯವರು ಕಳ್ಳ ಸರ್ಕಾರ ರಚಿಸುತ್ತಾರೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು. ಯಮಕನಮರಡಿ ಕ್ಷೇತ್ರದ ಭೂತರಾಮನಹಟ್ಟಿಯಲ್ಲಿ ಇಂದು ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಪರ ಪ್ರಚಾರ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದರು.

ಸಭೆಯಲ್ಲಿ ಮಾತನಾಡಿದ ಅವರು, ಇವತ್ತು ಕಳ್ಳತನದ ಮೂಲಕ‌ ಅಧಿಕಾರಕ್ಕೆ ಬಂದಿರುವ ಬಿಜೆಪಿ‌ ಸರ್ಕಾರ ಕಳ್ಳತನದ ಸರ್ಕಾರ. ಮೂರು ವರ್ಷಗಳ ಆಡಳಿತದಲ್ಲಿ ಭ್ರಷ್ಟಾಚಾರದಲ್ಲಿ ಬಿಜೆಪಿ ಹೊಸ ದಾಖಲೆ ಬರೆದಿದೆ. ಕರ್ನಾಟಕ ಸರ್ಕಾರ ಭಾರತ ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರ ಎಂದು ಕಿಡಿಕಾರಿದರು. ಗುತ್ತಿಗೆದಾರರ ಸಂಘದ ಅಧ್ಯಕ್ಷರು ಪ್ರಧಾನಮಂತ್ರಿ ಅವರಿಗೆ ಬರೆದ ಪತ್ರದಲ್ಲಿ 40 ಪರ್ಸೆಂಟ್ ಕಮಿಷನ್ ಬಗ್ಗೆ ಉಲ್ಲೇಖಿಸಿದ್ದಾರೆ. ಆದರೂ ಈ ಬಗ್ಗೆ ಈವರೆಗೂ ಪ್ರಧಾನಿ ಮೋದಿ ಚಕಾರ ಎತ್ತಲಿಲ್ಲ ಎಂದು ರಾಹುಲ್​ ಗಾಂಧಿ ಪಿಎಂ ವಿರುದ್ಧ ಹರಿಹಾಯ್ದರು.

ರಾಜ್ಯದಲ್ಲಿ ಪಿಎಸ್ಐ, ಸಹಾಯಕ‌ ಉಪನ್ಯಾಸಕ, ಕೋ-ಆಪರೇಟಿವ್ ಬ್ಯಾಂಕ್ ನೇಮಕಾತಿ ಸೇರಿ ಎಲ್ಲದರಲ್ಲೂ ಭ್ರಷ್ಟಾಚಾರ ನಡೆದಿದೆ. ಇವತ್ತು ಕರ್ನಾಟಕ ರಾಜ್ಯಕ್ಕೆ ಪ್ರಚಾರಕ್ಕೆ ಬಂದು ಭಾಷಣ ಮಾಡುತ್ತಿರುವ ಪ್ರಧಾನಿ ಮೋದಿ ಭ್ರಷ್ಟಾಚಾರದ ಬಗ್ಗೆ ಒಂದು ಶಬ್ದವೂ ಮಾತನಾಡುತ್ತಿಲ್ಲ. ಮೂರು ವರ್ಷಗಳಲ್ಲಿ ಭ್ರಷ್ಟಾಚಾರದ ಬಗ್ಗೆ ಏನು ಕ್ರಮ ಕೈಗೊಂಡಿದ್ದಿರಿ..? ಎಷ್ಟು ಜನರನ್ನು ನೀವು ಜೈಲಿಗೆ ಕಳಿಸಿದ್ದಿರಿ..? ಇಲ್ಲಿಗೆ ಬರುತ್ತಾರೆ, ಯಾವುದೋ‌ ಒಂದು ನೆಪ ಹೇಳಿ‌ ದೆಹಲಿಗೆ ಹೋಗುತ್ತಾರೆ, ಎಂದು ಪ್ರಧಾನಿ‌ ಮೋದಿಗೆ ರಾಹುಲ್ ಗಾಂಧಿ ಪ್ರಶ್ನಿಸಿದರು.

400 ರೂ ಇದ್ದ ಗ್ಯಾಸ್ ಈಗ 1100 ರೂ.:400 ರೂ. ಇದ್ದ ಗ್ಯಾಸ್ ಸಿಲಿಂಡರ್ ಬೆಲೆ 1100 ರೂ. ಆಗಿದೆ. 60 ರೂ. ಇದ್ದ ಪೆಟ್ರೋಲ್ ಬೆಲೆ‌ 100 ರೂ. ಗಡಿ ದಾಟಿದೆ. ಇನ್ನು ಪ್ರತಿ‌ ವರ್ಷ 2 ಕೋಟಿ ಉದ್ಯೋಗ ಕೊಡುತ್ತೇನೆ ಎಂದು ಮಾತು ಕೊಟ್ಟಿದ್ದಿರಿ. ಈ ಎಲ್ಲ ವಿಚಾರಗಳ ಬಗ್ಗೆ ನೀವು ಏನು ಕ್ರಮ ಕೈಗೊಂಡಿದ್ದಿರಿ ಎಂದು ಪ್ರಶ್ನಿಸಿದ ರಾಹುಲ್ ಗಾಂಧಿ, ಪ್ರವಾಹದ ಸಂದರ್ಭದಲ್ಲಿ ನೀವು ಯಾಕೆ ಬರಲಿಲ್ಲ. ಅಂತಾರಾಜ್ಯ ಜಲವಿವಾದ ಸಂದರ್ಭದಲ್ಲಿ‌ ನೀವು ಏನಾದ್ರೂ ಧ್ವನಿ ಎತ್ತಿದ್ದಿರಾ..? ಬಡವರು, ರೈತರು, ಯುವಕರ ಬಗ್ಗೆ ಒಂದು ಶಬ್ದವನ್ನೂ ಪ್ರಧಾನಮಂತ್ರಿ ಎತ್ತಿಲ್ಲ ಎಂದು ರಾಹುಲ್ ಗಾಂಧಿ‌ ಕಿಡಿಕಾರಿದರು.

91 ಬಾರಿ ಕಾಂಗ್ರೆಸ್​​ನವರು ನನ್ನ ಬೈದಿದ್ದಾರೆ ಎಂದು ತಮ್ಮ ಭಾಷಣದಲ್ಲಿ ಹೇಳುತ್ತಾರೆ. ಆದರೆ ಯಾವ ವಿಷಯಗಳ ಬಗ್ಗೆ ಚರ್ಚೆ ಮಾಡಬೇಕೋ ಅವುಗಳ ಬಗ್ಗೆ ಅವರು ಮಾಡುವುದಿಲ್ಲ. ಆದರೆ, ಕಾಂಗ್ರೆಸ್ ಪಕ್ಷ‌ ನುಡಿದಂತೆ ನಡೆಯುತ್ತದೆ. ನೋಟ್ ಬ್ಯಾನ್ ನಂತಹ ಕೆಟ್ಟ ನಿರ್ಧಾರ ನಾವು ತೆಗೆದುಕೊಳ್ಳಲ್ಲ. ಬಿಜೆಪಿಯವರು ರೈತರು, ಯುವಕರು, ಕಾರ್ಮಿಕರ ವಿರುದ್ಧವಾಗಿ ಕೆಲಸ ಮಾಡಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರದ ಆಡಳಿತದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಅವರು ಬಡವರಿಗಾಗಿ ಕೆಲಸ ಮಾಡಿದ್ದರು. ಈ ಬಾರಿ ಒಂದು ದೊಡ್ಡ ಕ್ರಾಂತಿಕಾರಿ ಕೆಲಸಕ್ಕೆ ಕೈ ಹಾಕಿದ್ದೇವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ‌ ದಿನವೇ ಐದು ಗ್ಯಾರಂಟಿಗಳನ್ನು ಜಾರಿಗೆ ತರುತ್ತೇವೆ ಎಂದು ಹೇಳಿದರು.

ಚುನಾವಣೆಯಲ್ಲಿ‌ ಬಿಜೆಪಿಗೆ 40 ಸೀಟ್ ಮಾತ್ರ: ನೋಟ್ ಬ್ಯಾನ್ ಮತ್ತು ಜಿಎಸ್​ಟಿಯಿಂದ ಬಹಳಷ್ಟು ನಿರುದ್ಯೋಗ ಸಮಸ್ಯೆ ಉದ್ಭವಿಸಿದೆ. ಖಾಲಿ ಇರುವ 2.5 ಲಕ್ಷ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ. ಐದು ವರ್ಣದಲ್ಲಿ 10 ಲಕ್ಷ ಮಂದಿಗೆ ನೌಕರಿ ಕೊಡುತ್ತೇವೆ. 15 ಲಕ್ಷ ಕೋಟಿ ರೂ. ರೈತರಿಗೆ ಮೀಸಲಿಡುತ್ತೇವೆ. ಹಾಲಿನ ಪ್ರೋತ್ಸಾಹಧನ 5 ರೂ. 7 ರೂ. ಹೆಚ್ಚಿಸುತ್ತೇವೆ. ಕಳೆದ ಮೂರು ವರ್ಷದಲ್ಲಿ ರಾಜ್ಯದ ಜನರಿಗೆ 40 ಪರ್ಸೆಂಟ್ ಎಂಬುದನ್ನು ಬಾಯಿಪಾಠ ಮಾಡಿಸಿದ್ದಾರೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ‌ ಬಿಜೆಪಿಗೆ 40 ಸೀಟ್ ಮಾತ್ರ ಗೆಲ್ಲಿಸಬೇಕೆಂದು ರಾಹುಲ್ ಗಾಂಧಿ ಕೇಳಿಕೊಂಡರು.

ಅಭ್ಯರ್ಥಿ ಸತೀಶ ಜಾರಕಿಹೊಳಿ ಮಾತನಾಡಿ, ಮೂರು ಬಾರಿ ನನಗೆ ಆಶೀರ್ವಾದ ಮಾಡಿದ್ದಿರಿ. ಈಗ ನಾಲ್ಕನೇ ಬಾರಿ ನನಗೆ ತಮ್ಮ ಸೇವೆ ಸಲ್ಲಿಸಲು ಅವಕಾಶ ಕೊಡುತ್ತಿರಿ ಎಂಬ ವಿಶ್ವಾಸವಿದೆ. 2008ರಲ್ಲಿ ಕ್ಷೇತ್ರ ಯಾವ ರೀತಿ ಇತ್ತು, ಈಗ ಹೇಗೆ ಆಗಿದೆ ಎಂಬುದು ಎಲ್ಲರಿಗೂ‌ ಗೊತ್ತಿರುವ ವಿಚಾರ. ರಾಜ್ಯದಲ್ಲಿ ಟಾಪ್ ಹತ್ತರಲ್ಲಿ ನಮ್ಮನ್ನ ತಪ್ಪಿಸಲು‌ ಯಾರಿಂದಲೂ ಸಾಧ್ಯವಿಲ್ಲ. ನಮ್ಮ ವಿರೋಧಿಗಳು ಇನ್ನು ಇಪ್ಪತ್ತು ವರ್ಷ ನಮ್ಮ ಸಮೀಪ ಬರಬಾರದು. ಎರಡು ಮತ್ತು ಮೂರನೇ ಸುತ್ತಿನಲ್ಲೆ ನಮ್ಮ ಗೆಲುವಾಗಬೇಕು, ನಮ್ಮ ಗೆಲುವಿನ ಸಂದೇಶ ರಾಜ್ಯಕ್ಕೆ ಹೋಗಬೇಕು ಎಂದು ಮನವಿ ಮಾಡಿಕೊಂಡರು.

ಇದನ್ನೂ ಓದಿ:ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಹುಬ್ಬಳ್ಳಿಗೆ ಆಗಮನ.. ಕಾಂಗ್ರೆಸ್​​ ಪರ ಪ್ರಚಾರ

ABOUT THE AUTHOR

...view details