ಬೆಳಗಾವಿ :ಡಿಸಿಎಂ ಶಿವಕುಮಾರ್ ಆಯೋಜಿಸಿದ್ದ ಭೋಜನಕೂಟದಲ್ಲಿ ಹಾಜರಾಗಿದ್ದ ಶಾಸಕ ಎಸ್ ಟಿ ಸೋಮಶೇಖರ್ ಹೆಗಲ ಮೇಲೆ ಕೈಹಾಕಿಕೊಂಡು ತಮ್ಮ ವಿಧಾನಸಭೆ ಕೊಠಡಿಗೆ ಕರೆದೊಯ್ದು ವಿಪಕ್ಷನಾಯಕ ಆರ್ ಅಶೋಕ್ ಮಾಹಿತಿ ಪಡೆದುಕೊಂಡರು. ಬೆಳಗಾವಿ ನಗರ ಹೊರವಲಯದಲ್ಲಿ ಬುಧವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ವೇಳೆ ಎಸ್ ಟಿ ಸೋಮಶೇಖರ್, ಶಿವರಾಂ ಹೆಬ್ಬಾರ್ ಕಾಣಿಸಿಕೊಂಡಿದ್ದು ಬಿಜೆಪಿಗೆ ಮುಜುಗರ ಉಂಟು ಮಾಡಿತ್ತು. ಈ ಬಗ್ಗೆ ಸೋಮಶೇಖರ್ ಜತೆ ಮಾತನಾಡುವುದಾಗಿ ಹೇಳಿದ್ದ ಅಶೋಕ್, ಇಂದು ಸಂಜೆ ತಮ್ಮ ವಿಧಾನಸಭೆ ಕೊಠಡಿಗೆ ಕರೆದುಕೊಂಡು ಹೋಗಿ ಮಾತುಕತೆ ನಡೆಸಿದರು. ಸೋಮಶೇಖರ್ ಜತೆ ಮಾತನಾಡಿ ಮಾಹಿತಿ ಪಡೆದುಕೊಂಡರು.
ಡಿಕೆಶಿ ಊಟಕ್ಕೆ ಕರೆದಿದ್ದರು ಅದಕ್ಕೆ ಹೋಗಿದ್ದೆ. ನಾನು ಸಿಎಲ್‌ಪಿ ಸಭೆಯಲ್ಲಿ ಭಾಗವಹಿಸಿರಲಿಲ್ಲ. ನಾನು ವಿಜಯೇಂದ್ರ ಆಯೋಜಿಸಿದ್ದ ಔತಣಕೂಟದಲ್ಲೇ ಊಟ ಮಾಡಿ ಹೋಗಿದ್ದೆ ಎಂದು ಅಶೋಕ್ ಅವರಿಗೆ ಸ್ಪಷ್ಟನೆ ಕೊಟ್ಟರು. ನಾನು ಪಕ್ಷ ವಿರೋಧಿ ನಡೆ ಪ್ರದರ್ಶನ ಮಾಡಿಲ್ಲ ಎಂದು ಇದೇ ವೇಳೆ ಸ್ಪಷ್ಟನೆ ಕೊಟ್ಟರು.
ಎಸ್ ಟಿ ಸೋಮಶೇಖರ್ ಸ್ಪಷ್ಟನೆ :ಈ ಕುರಿತು ಸುವರ್ಣಸೌಧದಲ್ಲಿ ಪ್ರತಿಕ್ರಿಯಿಸಿದ್ದ ಶಾಸಕ ಎಸ್ ಟಿ ಸೋಮಶೇಖರ್, ನಾನು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಹೋಗಿಲ್ಲ. ನಾನು ಡಿಸಿಎಂ ಡಿಕೆ ಶಿವಕುಮಾರ್ ಕರೆದ ಭೋಜನಕೂಟಕ್ಕೆ ಮಾತ್ರ ಹೋಗಿದ್ದೆ. ನಾನು ನಿನ್ನೆ ರಾತ್ರಿ 8 ಗಂಟೆಯಿಂದ 10 ಗಂಟೆ ತನಕ ವಿಜಯೇಂದ್ರ ಜೊತೆಗೆ ಇದ್ದೆ. ನಮ್ಮ ಪಕ್ಷದ ಅಧ್ಯಕ್ಷ ವಿಜಯೇಂದ್ರ ಅವರು ಭೋಜನ ಕೂಟ ಇಟ್ಟುಕೊಂಡಿದ್ದರು. ಅವರ ಇಟ್ಟುಕೊಂಡಿದ್ದ ಔತಣಕೂಟದಲ್ಲಿ ನಾನು ಭಾಗಿಯಾಗಿ ಊಟ ಮಾಡಿದೆ. ಜೊತೆಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಸಹ ನನಗೆ ಊಟಕ್ಕೆ ಆಹ್ವಾನ ಕೊಟ್ಟಿದ್ದರು. ಹೀಗಾಗಿ 11 ಗಂಟೆಗೆ ಡಿಕೆಶಿ ಕರೆದ ಔತಣಕೂಟಕ್ಕೆ ತೆರಳಿ ವಿಷ್ ಮಾಡಿ ಬಂದೆ ಎಂದು ಸ್ಪಷ್ಟನೆ ನೀಡಿದ್ದರು.
ಕಾಂಗ್ರೆಸ್ ಸಭೆಯಲ್ಲಿ ಬಿಜೆಪಿ ಶಾಸಕರು :ಬುಧವಾರ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಬಿಜೆಪಿ ಶಾಸಕರಾದ ಎಸ್.ಟಿ.ಸೋಮಶೇಖರ್, ಶಿವರಾಂ ಹೆಬ್ಬಾರ್, ಹೆಚ್.ವಿಶ್ವನಾಥ್ ಕಾಣಿಸಿಕೊಂಡಿರುವುದು ಕುತೂಹಲಕ್ಕೆ ಕಾರಣವಾಗಿತ್ತು. ಆ ಮೂಲಕ ಬಿಜೆಪಿಯಿಂದ ಅಂತರ ಕಾಯ್ದುಕೊಳ್ಳುತ್ತಿರುವ ಮೂವರು ಕಾಂಗ್ರೆಸ್ಗೆ ನಿಕಟವಾಗುತ್ತಿದ್ದಾರಾ ಎಂಬ ಪ್ರಶ್ನೆಗಳು ಮೂಡಿವೆ. ಬಿಜೆಪಿ ಸಭೆಗಳಿಗೆ ಪ್ರಮುಖವಾಗಿ ಎಸ್.ಟಿ.ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಗೈರಾಗುತ್ತಿದ್ದಾರೆ. ಆದರೆ ಕಾಂಗ್ರೆಸ್ ಸಭೆ, ಅದರಲ್ಲೂ ಸಿಎಲ್‌ಪಿ ಸಭೆ ನಡೆಯುತ್ತಿರುವ ರೆಸಾರ್ಟ್ ಗೆ ಹೋಗಿರುವುದು ಅಚ್ಚರಿ ಮೂಡಿಸಿದೆ.
ಇದನ್ನೂ ಓದಿ :ನಾನು ಸಿಎಲ್‌ಪಿ ಸಭೆಗೆ ಹೋಗಿಲ್ಲ, ನಾನು ಡಿಸಿಎಂ ಕರೆದ ಭೋಜನಕೂಟಕ್ಕೆ ಹೋಗಿದ್ದೆ: ಎಸ್ ಟಿ ಸೋಮಶೇಖರ್