ಕರ್ನಾಟಕ

karnataka

ETV Bharat / state

ಮೆಟ್ರೋ ರೈಲು ಯೋಜನೆ ಹಂತ-2ರ ಕಾಮಗಾರಿ 2024ರೊಳಗೆ ಪೂರ್ಣ: ಸಿಎಂ

ವಿಧಾನ ಪರಿಷತ್​ನ ಪ್ರಶ್ನೋತ್ತರ ಕಲಾಪದಲ್ಲಿ ಮೆಟ್ರೋ ಹಂತ-2ರ ಕಾಮಗಾರಿ ಕುರಿತು ಕೇಳಲಾದ ಪ್ರಶ್ನೆಗೆ ಸಿಎಂ ಬೊಮ್ಮಾಯಿ ಉತ್ತರಿಸಿದರು.

basavaraj bommai
ಬಸವರಾಜ ಬೊಮ್ಮಾಯಿ

By

Published : Dec 29, 2022, 10:13 PM IST

ಬೆಂಗಳೂರ/ಬೆಳಗಾವಿ: ಬೆಂಗಳೂರು ಮೆಟ್ರೋ ರೈಲು ಯೋಜನೆ ಹಂತ-2ರ ಕಾಮಗಾರಿಯನ್ನು 2024ರೊಳಗೆ ಪೂರ್ಣಗೊಳಿಸಲು ಗಡುವು ನೀಡಿ ಕ್ರಮ ವಹಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಪರಿಷತ್ತಿನಲ್ಲಿಂದು ಸದಸ್ಯ ಡಾ.ಕೆ.ಗೋವಿಂದರಾಜು ಅವರ ಪ್ರಶ್ನೆಗೆ ಉತ್ತರಿಸಿ, ಮೆಟ್ರೋ ರೈಲು ಮಾರ್ಗವನ್ನು ವಿಮಾನ ನಿಲ್ದಾಣಕ್ಕೆ ಜೋಡಿಸುವ ಕಾರ್ಯವನ್ನು ವರ್ಷದೊಳಗೆ ಮಾಡಲು ಸೂಚಿಸಲಾಗಿದೆ. ಇನ್ನುಳಿದ ಕಾಮಗಾರಿಯನ್ನು ಸಹ ನಿಗದಿತ ಅವಧಿಯೊಳಗಡೆ ನಡೆಸಲು ಮತ್ತು ಸುವ್ಯವಸ್ಥಿತವಾಗಿ ಮೇಲ್ವಿಚಾರಣೆ ಮಾಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

ಲಾಕ್‌ಡೌನ್ ಮತ್ತು ಇನ್ನಿತರ ಕೆಲವು ವಿಷಯಗಳಿಂದಾಗಿ ಮೆಟ್ರೋ ಕಾಮಗಾರಿ ವಿಳಂಬವಾಗಿತ್ತು. ಪ್ರಸ್ತುತ 6 ಮಾರ್ಗಗಳಲ್ಲಿ 2 ಮಾರ್ಗಗಳನ್ನು ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಲಾಗಿದೆ. 3 ಮಾರ್ಗಗಳನ್ನು 2023ರಲ್ಲಿ ಕಾರ್ಯಾರಂಭಿಸಲು ಯೋಜಿಸಲಾಗಿದೆ. ಬಾಕಿ ಉಳಿದ ಇನ್ನೊಂದು ಮಾರ್ಗವನ್ನು ಮಾರ್ಚ್-2025ರಲ್ಲಿ ಶುರು ಮಾಡಲು ಯೋಜಿಸಲಾಗಿದೆ ಎಂದು ಮುಖ್ಯಮಂತ್ರಿಗಳು ಮಾಹಿತಿ ನೀಡಿದರು.

ದಾವಣಗೆರೆ ಜಿಲ್ಲೆಯ ಅಲ್ಪಸಂಖ್ಯಾತ ಸಮುದಾಯದ ಕಾಲೋನಿಗಳಲ್ಲಿ ಮೂಲಭೂತ ಸೌಕರ್ಯಗಳಾದ ರಸ್ತೆ, ಚರಂಡಿ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ಬಾಕಿ ಹಣ ಒದಗಿಸಿ ಕಾಮಗಾರಿಗಳನ್ನು ಪೂರ್ಣಗೊಳಿಸುತ್ತೇವೆ. ಅಲ್ಪಸಂಖ್ಯಾತರ ಇಲಾಖೆಯ ಸಚಿವರು ಮತ್ತು ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಹೆಚ್ಚುವರಿಯಾಗಿ ಮತ್ತೊಂದು ಮೌಲಾನಾ ಆಜಾದ್ ಶಾಲೆಯನ್ನು ಮಂಜೂರು ಮಾಡಲು ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿಗಳು, ಸದಸ್ಯರಾದ ಕೆ.ಅಬ್ದುಲ್ ಜಬ್ಬರ್ ಅವರ ಪ್ರಶ್ನೆಗೆ ಉತ್ತರಿಸಿದರು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಭೂಸ್ವಾಧೀನ ಪ್ರಕ್ರಿಯೆಯು ಸುಗಮವಾಗಿ ನಡೆಯುವಂತೆ ಮತ್ತು ತೊಡಕುಗಳಿಗೆ ಕಡಿವಾಣ ಹಾಕಲು ಕೆಲವು ನಿಯಮಗಳನ್ನು ಮಾಡಿದ್ದೇವೆ. ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಗಳಲ್ಲಿ ದಾಖಲಾದ ಕೆಲವು ಪ್ರಕರಣಗಳನ್ನು ಸಮರ್ಥವಾಗಿ ಎದುರಿಸುತ್ತೇವೆ. ಭೂಸ್ವಾಧೀನ ಪ್ರಕ್ರಿಯೆಯ ವಿಳಂಬಾತಿಗೆ ಕಾರಣ ಯಾರು ಎಂಬುದರ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ವಹಿಸುವುದಾಗಿ ಸದಸ್ಯರಾದ ಮರಿತಿಬ್ಬೇಗೌಡ ಅವರ ಪ್ರಶ್ನೆಗೆ ಮುಖ್ಯಮಂತ್ರಿಗಳು ಪ್ರತಿಕ್ರಿಯಿಸಿದರು.

ಇದನ್ನೂ ಓದಿ:ಲಿಂಗಾಯತ, ಒಕ್ಕಲಿಗರಿಗೆ ಸಿಹಿಸುದ್ದಿ: ಎರಡು ಪ್ರತ್ಯೇಕ ಪ್ರವರ್ಗ ರಚನೆಗೆ ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ

ABOUT THE AUTHOR

...view details