ಬೆಳಗಾವಿ:ನಗರದ ಬಿಮ್ಸ್ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ಗೆ ಬಲಿಯಾದ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಲು ಮೃತನ ಶವವನ್ನು ತಮಗೆ ನೀಡುವಂತೆ ಕುಟುಂಬಸ್ಥರು ಪಟ್ಟು ಹಿಡಿದ ಪರಿಣಾಮ ಕುಟುಂಬಸ್ಥರು ಹಾಗೂ ಬಿಮ್ಸ್ ಸಿಬ್ಬಂದಿ ನಡುವೆ ವಾಗ್ವಾದ ನಡೆದಿದೆ.
ಕೋವಿಡ್‌ನಿಂದ ಸಾವನ್ನಪ್ಪಿದ ವ್ಯಕ್ತಿಯ ಶವ ನೀಡುವಂತೆ ಪಟ್ಟು ಹಿಡಿದ ಸಂಬಂಧಿಕರು - ಕೋವಿಡ್ ನಿಂದ ಸಾವನ್ನಪ್ಪಿದ ವ್ಯಕ್ತಿಯ ಶವ ನೀಡುವಂತೆ ಪಟ್ಟುಹಿಡಿದ ಸಂಬಂಧಿಕರು
ಅಂತ್ಯಕ್ರಿಯೆ ಮಾಡಲು ನಮಗೆ ಅವಕಾಶ ನೀಡಬೇಕೆಂದು ಕುಟುಂಬಸ್ಥರು ಪಟ್ಟು ಹಿಡಿದ ಹಿನ್ನೆಲೆ ಬಿಮ್ಸ್ ಜಿಲ್ಲಾಸ್ಪತ್ರೆಯ ಸಿಬ್ಬಂದಿ ಮತ್ತು ಕುಟುಂಬಸ್ಥರ ನಡುವೆ ವಾಗ್ವಾದ ನಡೆದಿದೆ.
ತಾಲೂಕಿನ ಕಾಕತಿಯ ಗ್ರಾಮದ ಅಂಬೇಡ್ಕರ್ ಗಲ್ಲಿ ನಿವಾಸಿ ಸುರೇಶ್ ಮೇತ್ರಿ ( 51 ) ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆ. ಇವರಿಗೆ ಕಳೆದ ಹಲವು ದಿನಗಳ ಹಿಂದೆ ಸೋಂಕು ತಗುಲಿತ್ತು. ಹೀಗಾಗಿ ನಗರದ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಇಂದು ಬೆಳಗ್ಗೆ ಸಾವನ್ನಪ್ಪಿದ್ದು, ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಮೃತನ ಕುಟುಂಬಸ್ಥರು ಆರೋಪ ಮಾಡಿದ್ದಲ್ಲದೇ ಬಿಮ್ಸ್ ಸಿಬ್ಬಂದಿ ಜೊತೆಗೆ ವಾಗ್ವಾದ ನಡೆಸಿದರು. ಬಳಿಕ ಸಾವನ್ನಪ್ಪಿದ ವ್ಯಕ್ತಿಯ ಮೃತದೇಹವನ್ನ ಶವಗಾರಕ್ಕೆ ಸಾಗಿಸದೇ ನೇರವಾಗಿ ನಮಗೆ ನೀಡಬೇಕೆಂದು ಕುಟುಂಬಸ್ಥರು ಹೈಡ್ರಾಮಾ ನಡೆಸಿದರು.
ಕೋವಿಡ್ ಮಾರ್ಗಸೂಚಿಯಂತೆ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್‌ನಿಂದ ಸಾವನ್ನಪ್ಪಿದವರ ಮೃತದೇಹವನ್ನು ಮೊದಲು ಶವಾಗಾರಕ್ಕೆ ರವಾನಿಸಲಾಗುತ್ತದೆ. ಬಳಿಕ ಮಹಾನಗರ ಪಾಲಿಕೆ ಸಿಬ್ಬಂದಿ ಶವದ ಅಂತ್ಯಕ್ರಿಯೆ ನಡೆಸುತ್ತಾರೆ. ಆದ್ರೆ, ಇತ್ತ ವ್ಯಕ್ತಿಯ ಶವದ ಅಂತ್ಯಕ್ರಿಯೆಯನ್ನು ಮಾಡಲು ನಮಗೆ ಅವಕಾಶ ನೀಡಬೇಕೆಂದು ಕುಟುಂಬಸ್ಥರು ಪಟ್ಟು ಹಿಡಿದ ಹಿನ್ನೆಲೆ ಮರಣೋತ್ತರ ಪರೀಕ್ಷೆಗೆ ನೀಡಿ ಪಾಲಿಕೆಗೆ ಒಪ್ಪಿಸುತ್ತೇವೆ. ಅಲ್ಲಿಂದ ಬೇಕಾದರೆ ನೀವು ತೆಗೆದುಕೊಳ್ಳಿ ಎಂದು ತಿಳಿಸಿದ್ದಾರೆ. ಇದ್ಯಾವುದಕ್ಕೂ ಕ್ಯಾರೆ ಎನ್ನದೇ ಕುಟುಂಬಸ್ಥರು ಶವ ಬೇಕೆಂದು ಪಟ್ಟು ಹಿಡಿದರು. ಮಾಹಿತಿ ಮೇರೆಗೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಪರಿಸ್ಥಿತಿ ಶಾಂತಗೊಳಿಸಲು ಸಂಬಂಧಿಕರ ಮನವೊಲಿಸಲು ಮುಂದಾದರು. ಮೃತನ ಕುಟುಂಬಸ್ಥರು ಯಾವುದಕ್ಕೂ ಜಗ್ಗದ ಹಿನ್ನೆಲೆ ಪೊಲೀಸರು ಸಂಬಂಧಿಕರ ಕಣ್ತಪ್ಪಿಸಿ ಮರಣೋತ್ತರ ಪರೀಕ್ಷೆಗೆ ಶವ ತೆಗೆದುಕೊಂಡು ಹೋಗಿದ್ದಾರೆ.