ಚಿಕ್ಕೋಡಿ/ಬೆಳಗಾವಿ:ಮುಂಬೈನಲ್ಲಿ ಕೆಲಸಕ್ಕೆಂದು ತೆರಳಿ ಕರ್ನಾಟಕಕ್ಕೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ್ದ 30 ಜನರ ಪೈಕಿ ಇಬ್ಬರು ಕಾರ್ಮಿಕರಿಗೆ ಕೊರೊನಾ ಸೋಂಕು ತಗುಲಿದೆ.
ಕರ್ನಾಟಕ ಪ್ರವೇಶಕ್ಕೆ ಯತ್ನಸಿದ್ದ 30 ಜನರಲ್ಲಿ ಇಬ್ಬರಿಗೆ ಕೊರೊನಾ: ನಿಪ್ಪಾಣಿಯ 11 ಮಂದಿಗೆ ಕ್ವಾರಂಟೈನ್!? - ಬೆಳಗಾವಿಯಲ್ಲಿ ಕೊರೊನಾ ಎಫೆಕ್ಟ್
ಕರ್ನಾಟಕಕ್ಕೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ್ದ 30 ಜನರ ಪೈಕಿ ಇಬ್ಬರು ಕಾರ್ಮಿಕರಿಗೆ ಕೊರೊನಾ ಸೋಂಕು ತಗುಲಿದೆ. ಇದರಿಂದ ಗಡಿ ಭಾಗ ನಿಪ್ಪಾಣಿಯಲ್ಲಿ ಆತಂಕ ಹೆಚ್ಚಾಗಿದೆ.
ಮುಂಬೈನ ಹೋಟೆಲ್‌ಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಹಾಗೂ ಅವರು ಕುಟುಂಬಸ್ಥರು ಮತ್ತು ಕೆಲ ಹೋಟೆಲ್ ಮಾಲೀಕರು ಸೇರಿ ಒಟ್ಟು 30 ಜನ ಏ.16ರಂದು ಮುಂಬೈನಿಂದ ಕಂಟೇನರ್ ವಾಹನದ ಮೂಲಕ ಹಾಸನ ಜಿಲ್ಲೆಗೆ ಹೊರಟಿದ್ದರು. ಆದರೆ, ಕರ್ನಾಟಕ ಗಡಿ ನಿಪ್ಪಾಣಿ ಬಳಿ ತಿಂಡಿ ತಿನ್ನಲು ಇಳಿದಿದ್ದಾರೆ. ಆದರೆ, ಅವರಿಗೆ ಅಲ್ಲಿ ಊಟ- ತಿಂಡಿ ಸಿಕ್ಕಿರಲಿಲ್ಲ. ನಂತರ ಈ ವಿಷಯ ಸ್ಥಳೀಯ ಸಾಮಾಜಿಕ ಕಾರ್ಯಕರ್ತರಿಗೆ ಗೊತ್ತಾಗಿ ತಿಂಡಿ, ಚಹಾ ವಿತರಣೆ ಮಾಡಿದ್ದಾರೆ.
ಬಳಿಕ ಈ ವಿಷಯ ಪೊಲೀಸರಿಗೂ ತಿಳಿದು ಸ್ಥಳಕ್ಕೆ ಆಗಮಿಸಿ ಎಲ್ಲರಿಗೂ ಕಂಟೇನರ್ ವಾಹನದಲ್ಲೇ ಮರಳಿ ಮಹಾರಾಷ್ಟ್ರಕ್ಕೆ ತೆರಳಲು ಸೂಚಿಸಿದ್ದಾರೆ. ಮಹಾರಾಷ್ಟ್ರದ ಕಿಣಿ ಟೋಲ್ ನಾಕಾ ಬಳಿ ಮಹಾರಾಷ್ಟ್ರ ಪೊಲೀಸರು ವಾಹನವನ್ನು ತಡೆದು ಎಲ್ಲರ ತಪಾಸಣೆ ನಡೆಸಿ ನಂತರ ಕೊಲ್ಲಾಪುರದಲ್ಲಿ ಕ್ವಾರಂಟೈನ್‌ಗೆ ಒಳಪಡಿಸಿದ್ದಾರೆ. ಪರೀಕ್ಷಾ ವರದಿಯಲ್ಲಿ ಇಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಮಾಹಿತಿಯಿಂದ ಎಚ್ಚೆತ್ತ ನಿಪ್ಪಾಣಿ ಪೊಲೀಸರು ಹಾಗೂ ಅಧಿಕಾರಿಗಳು ಕಂಟೇನರ್ ವಾಹನದಲ್ಲಿ ಬಂದಿದ್ದವರಿಗೆ ಆಹಾರ ನೀಡಿದ್ದ ನಿಪ್ಪಾಣಿಯ ನಗರಸಭೆ ಸದಸ್ಯ ಸೇರಿ 11 ಜನರನ್ನು ಕ್ವಾರಂಟೈನ್‌ನಲ್ಲಿ ಇರಿಸಿದ್ದಾರೆ.