ಚಿಕ್ಕೋಡಿ: ನೆರೆ ಸಂತ್ರಸ್ತರಿಗೆ ಸೇರಬೇಕಿದ್ದ ಅನ್ನಭಾಗ್ಯದ ಅಕ್ಕಿಯನ್ನು ಕಾಳ ಸಂತೆಗೆ ಸಾಗಿಸುವಾಗ ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಾಳ ಸಂತೆಗೆ ಸಾಗಿಸುತ್ತಿದ್ದ ಲಾರಿ ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದಲ್ಲಿ ಲಾರಿ ಸಮೇತ ಖದೀಮರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ. ಚಾಲಕ ಅಸ್ಸಾಬ್ ಮುಲ್ತಾಬ್ ಮಹಮ್ಮದ್(23), ಮಹಮ್ಮದಸಾಬ್ ಬುದ್ದನ್(20) ಬಂಧಿತ ಆರೋಪಿಗಳಾಗಿದ್ದಾರೆ. ಇವರು ಸಾರ್ವಜನಿಕ ಬಳಕೆಯ ಅಕ್ಕಿಯನ್ನು ಸಾಗಿಸುವಾಗ ಸಿಕ್ಕಿಬಿದ್ದಿದ್ದಾರೆ.
ಲಾರಿಯಲ್ಲಿ 50 ಕೆಜಿ ತೂಕದ 600 ಅಕ್ಕಿ ಚೀಲಗಳನ್ನು ಸಾಗಿಸಲಾಗುತ್ತಿತ್ತು. ಎಫ್ಐಆರ್ ದಾಖಲಾದರೂ ಅಕ್ಕಿ ಎಲ್ಲಿಂದ ಬಂತು ಎಂದು ಮಾಹಿತಿ ಕಲೆಹಾಕದ ಪೊಲೀಸರ ವಿರುದ್ಧ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಕ್ಕಿ ಮಾರಾಟದ ಹಿಂದೆ ಸ್ಥಳೀಯ ಪ್ರಭಾವಿಗಳ ಕೈವಾಡವಿದೆ. ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳದಿದ್ದರೆ ಹೋರಾಟದ ಬಿಸಿ ಮುಟ್ಟಿಸುವುದಾಗಿ ಹೇಳಿದರು.ಈ ಕುರಿತು ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.