ಚಿಕ್ಕೋಡಿ (ಬೆಳಗಾವಿ): ಆಗಸ್ಟ್ 11ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಥಣಿ ತಾಲೂಕಿನ ಕೋಕಟನೂರ ಗ್ರಾಮಕ್ಕೆ ಆಗಮಿಸುತ್ತಿದ್ದು ಎಚ್ಚೆತ್ತುಕೊಂಡ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರಸ್ತೆ ದುರಸ್ತಿ ಕಾರ್ಯಕ್ಕೆ ಮುಂದಾಗಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಅಥಣಿಯಿಂದ ಕೋಕಟನೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸುಮಾರು 20 ಕಿಮೀ ರಸ್ತೆ ದುರಸ್ತಿ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ಈ ಹಿಂದೆ ರಸ್ತೆ ದುರಸ್ತಿಗೆ ಅಥಣಿ ಲೋಕೋಪಯೋಗಿ ಅಧಿಕಾರಿಗಳಿಗೆ ಹಲವು ಬಾರಿ ಜನರು ಮನವಿ ಸಲ್ಲಿಸಿದರೂ ಕ್ಯಾರೆನ್ನದ ಅಧಿಕಾರಿಗಳು ಸದ್ಯ ಸಿಎಂ ಬರುತ್ತಿದ್ದಾರೆಂದು ದುರಸ್ತಿಗೆ ಮುಂದಾಗಿದ್ದು, ಜನಸಾಮಾನ್ಯರಿಗೊಂದು ನ್ಯಾಯ, ಜನಪ್ರತಿನಿಧಿಗಳಿಗೆ ಒಂದು ನ್ಯಾಯವೇ ಎಂದು ಪಿಡಬ್ಲ್ಯೂಡಿ ಅಧಿಕಾರಿಗಳನ್ನು ಪ್ರಶ್ನಿಸುತ್ತಿದ್ದಾರೆ.
ಅಥಣಿಯಿಂದ ಕೋಕಟನೂರ ಮಾರ್ಗವಾಗಿ ಸಾವಳಗಿ ಗ್ರಾಮಕ್ಕೆ ಸಂಪರ್ಕ ನೀಡವು ರಸ್ತೆ ಹಾಳಾಗಿದ್ದು, ಅಭಿವೃದ್ಧಿಗೆ ಹಲವು ಬಾರಿ ಸ್ಥಳಿಯರು ಮನವಿ ಸಲ್ಲಿಸಿದರೂ ಅಧಿಕಾರಿಗಳು ಕುರುಡು ಜಾಣತನ ಪ್ರದರ್ಶನ ಮಾಡಿದ್ದರು. ಆದರೆ ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದ ಆರು ಸಚಿವರು ಕೋಕಟನೂರು ಗ್ರಾಮಕ್ಕೆ ವಿವಿಧ ಕಾಮಗಾರಿಗಳನ್ನು ಉದ್ಘಾಟನೆಗೆ ಬರುತ್ತಿರುವುದಕ್ಕಾಗಿ ಇದೀಗ ಸಮರೋಪಾದಿಯಲ್ಲಿ ದುರಸ್ತಿಗೆ ಮುಂದಾಗಿದ್ದಾರೆ. ಸಿಎಂ ಸಂಚರಿಸುವ ರಸ್ತೆಯನ್ನಷ್ಟೇ ದುರಸ್ತಿ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಕೋಕಟನೂರ-ಯಲ್ಲಮ್ಮವಾಡಿ ರಸ್ತೆ ಸಂಪೂರ್ಣ ಹಾಳಾಗಿದ್ದರೂ ಅಧಿಕಾರಿಗಳು ಅತ್ತ ನೋಡದೆ ತಾರತಮ್ಯ ಮಾಡುತಿದ್ದಾರೆ ಎಂದು ಆರೋಪಿಸಿದ್ದಾರೆ.