ಬೆಳಗಾವಿ :ಮಹಾಮಾರಿ ಕೊರೊನಾ ಲಾಕ್‍ಡೌನ್‍ನಿಂದ ತೀವ್ರ ಸಂಕಷ್ಟದಲ್ಲಿರುವ ಗೃಹ ಕಾರ್ಮಿಕರಿಗೂ ಕೂಡ ರಾಜ್ಯ ಸರ್ಕಾರ ಫುಡ್ ಕಿಟ್ ಸೇರಿ ಹಲವು ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಪ್ರತಿಭಟಿಸಿದರು. ಅಲ್ಲದೆ ಕಾರ್ಮಿಕ ಇಲಾಖೆ ಸಚಿವ ಶಿವರಾಮ್ ಹೆಬ್ಬಾರ್ ಅವರಿಗೆ ಬೆಳಗಾವಿಯ ಗೃಹ ಕಾರ್ಮಿಕ ಮಹಿಳೆಯರು ಮನವಿ ಸಲ್ಲಿಸಿ ಒತ್ತಾಯಿಸಿದರು.
ಗೃಹ ಕಾರ್ಮಿಕರಿಗೂ ಪರಿಹಾರ ನೀಡುವಂತೆ ಮಹಿಳೆಯರಿಂದ ಪ್ರತಿಭಟನೆ - Corona Special Package
ಕೊರೊನಾ ಲಾಕ್ಡೌನ್ ಬಳಿಕ ಹಲವು ವರ್ಗದ ಜನತೆಗೆ ವಿಶೇಷ ಪ್ಯಾಕೇಜ್ನಲ್ಲಿ ಪರಿಹಾರ ಘೋಷಿಸಲಾಗಿದೆ. ಇದೀಗ ಗೃಹ ಕಾರ್ಮಿಕರ ಒಕ್ಕೂಟ ಕೂಡ ನಮಗೂ ಇತರರಂತೆ ಪರಿಹಾರ ಘೋಷಿಸಿ ಎಂದು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ್ದಾರೆ..
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗೃಹ ಕಾರ್ಮಿಕರ ಹಕ್ಕುಗಳ ಯೂನಿಯನ್ ಸಂಘಟನೆಯ ನೂರಾರು ಮಹಿಳೆಯರು ಪ್ರತಿಭಟನೆ ಹಮ್ಮಿಕೊಂಡಿದ್ದರು. ಎಲ್ಲ ಕಾರ್ಮಿಕರಿಗೂ ಸರ್ಕಾರ ಪರಿಹಾರ ಘೋಷಿಸಿದೆ. ಅದರಂತೆ ಮನೆ ಕೆಲಸ ಮಾಡುವ ಮಹಿಳೆಯರಿಗೂ ಸರ್ಕಾರ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿ ಕಾರ್ಮಿಕ ಇಲಾಖೆ ಸಚಿವ ಶಿವರಾಮ್ ಹೆಬ್ಬಾರ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
ಕಳೆದ 10 ವರ್ಷಗಳಿಂದ ಗೃಹ ಕಾರ್ಮಿಕರ ಹಕ್ಕುಗಳ ಯೂನಿಯನ್ ಸಂಘಟನೆ ಸ್ಥಾಪಿಸಿಕೊಂಡು ವಿವಿಧ ಬೇಡಿಕೆ ಸಂಬಂಧ ಹೋರಾಟ ಮಾಡುತ್ತಿದ್ದೇವೆ. ಈಗ ಕೊರೊನಾ ಲಾಕ್‍ಡೌನ್‍ನಿಂದ ಮನೆ ಕೆಲಸ ಮಾಡುವ ಮಹಿಳೆಯರು ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಎಲ್ಲ ಕಾರ್ಮಿಕರಂತೆ 5 ಸಾವಿರ ಮೊತ್ತದ ಫುಡ್ ಕಿಟ್‍ಗಳನ್ನು ಮನೆ ಕೆಲಸ ಮಾಡುವ ಮಹಿಳೆಯರಿಗೆ ನೀಡಬೇಕು ಎಂದು ಆಗ್ರಹಿಸಿದರು. ಮನವಿಗೆ ಸ್ಪಂದಿಸಿದ ಸಚಿವ ಶಿವರಾಮ ಹೆಬ್ಬಾರ್ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.