ಬೆಳಗಾವಿ: ವಿವಿಧ ಸಂಘ ಸಂಸ್ಥೆಗಳು ತಮ್ಮ ಬೇಡಿಕೆ ಈಡೇರಿಸುವಂತೆ ಕಳೆದ 9 ದಿನಗಳಿಂದ ಬೆಳಗಾವಿಯ ಸುವರ್ಣ ಗಾರ್ಡನ್ ಬಳಿಯ ಟೆಂಟ್ನಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆಯುತ್ತಿವೆ. ಇಂದು ಕರ್ನಾಟಕ ಮದ್ಯಪಾನ ಪ್ರಿಯರ ಹೋರಾಟ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಪ್ರತಿಭಟನಾಕಾರರು ವಿವಿಧ ಬೇಡಿಕೆ ಮುಂದಿಟ್ಟಿದ್ದು, ಎಲ್ಲರೂ ಹುಬ್ಬೇರಿಸುವಂತೆ ಮಾಡಿತು.
ಕಾರ್ಮಿಕ ಮಂಡಳಿಯ ಅಡಿ ಮಧ್ಯಪಾನ ಪ್ರಿಯರ ಕಲ್ಯಾಣ ನಿಧಿ ಸ್ಥಾಪಿಸಬೇಕು. ವಾರ್ಷಿಕ ಆದಾಯದಲ್ಲಿ ಶೇ.10ರಷ್ಟು ಕಲ್ಯಾಣ ನಿಧಿಗೆ ವರ್ಗಾಯಿಸಬೇಕು. ಮಧ್ಯಪಾನ ಪ್ರಿಯರ ಪ್ರತಿಭಾನ್ವಿತ ಮಕ್ಕಳಿಗೆ ಮಾಸಾಶನ ನೀಡಬೇಕು. ಮದ್ಯಪಾನ ಪ್ರಿಯರು ಅನಾರೋಗ್ಯಕ್ಕೆ ತುತ್ತಾದಲ್ಲಿ ವೈದ್ಯಕೀಯ ವೆಚ್ಚವನ್ನು ಸಂಪೂರ್ಣವಾಗಿ ಸರ್ಕಾರವೇ ಭರಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಿದರು.
ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಆಗಮಿಸಿ ಮದ್ಯ ಪ್ರಿಯರ ಸಮಸ್ಯೆಗಳನ್ನು ಆಲಿಸಿದರು. ಈ ವೇಳೆ ಪ್ರತಿಭಟನಾಕಾರರು ಸಚಿವರಲ್ಲಿ, ನಮಗೆ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪಿಸಬೇಕು. ಇತರ ಸಾಲ ಸೌಲಭ್ಯ ಹಾಗೂ ವಸತಿ ಸೌಲಭ್ಯ ಒದಗಿಸಬೇಕು. ಮದ್ಯ ಸೇವಿಸಿ ಮೃತ ಪಟ್ಟರೆ 10 ಲಕ್ಷ ರೂ. ವಿಮಾ ಸೌಲಭ್ಯ ನೀಡಬೇಕು. ಮದುವೆ ಆಗಲು 2 ಲಕ್ಷ ರೂ.ಪ್ರೋತ್ಸಾಹ ಧನ ವಿತರಿಸಬೇಕು. ದರ ಹೆಚ್ಚಿಸುವ ವೇಳೆ ನಮ್ಮ ಸಂಘವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಎಂಆರ್ ಪಿ ದರದಂತೆ ಮದ್ಯ ಮಾರಾಟ ಮಾಡುವಂತೆ ಅಬಕಾರಿ ಅಧಿಕಾರಿಗಳಿಗೆ ಸೂಚಿಸುವಂತೆ ಒತ್ತಾಯಿಸಿದರು.