ಗಂಗಾವತಿ: ತಮ್ಮ ನ್ಯಾಯೋಚಿತ ಬೇಡಿಕೆಗಳನ್ನು ಈಡೇರಿಸುವ ಬದಲಿಗೆ ಸರ್ಕಾರ ತಮ್ಮ ಮೇಲೆ ಅಮಾನತಿನಂತಹ ಕ್ರಮಕ್ಕೆ ಮುಂದಾಗಿರುವುದನ್ನ ಖಂಡಿಸಿ ನಗರದ ಪ್ರಮುಖ ವೃತ್ತ, ರಸ್ತೆಗಳಲ್ಲಿ ಆರೋಗ್ಯ ಇಲಾಖೆಯ ಹೊರಗುತ್ತಿಗೆ ನೌಕರರು ಜಾಥಾದ ಮೂಲಕ ಪ್ರತಿಭಟಿಸಿದರು.
ಮಹಾತ್ಮಗಾಂಧಿ ವೃತ್ತದಿಂದ ಆರಂಭವಾದ ಪ್ರತಿಭಟನಾ ಜಾಥಾ ದುರುಗಮ್ಮ ದೇವಸ್ಥಾನದ ಮೂಲಕ ಸಾಗಿ, ಶ್ರೀಕೃಷ್ಣದೇವರಾಯ ವೃತ್ತಕ್ಕೆ ತಲುಪಿತು. ಅಲ್ಲಿಗೆ ಆಗಮಿಸಿದ ಕಾಂಗ್ರೆಸ್ ಮುಖಂಡರಿಗೆ ಹೊರಗುತ್ತಿಗೆ ನೌಕರರು ಮನವಿ ಸಲ್ಲಿಸಿದರು.
ಎಸ್ಎಫ್ಐ ಸಂಘಟನೆಯೂ ನೌಕರರಿಗೆ ಬೆಂಬಲ ಸೂಚಿಸಿತು. ಬಳಿಕ ತಾಲೂಕು ಪಂಚಾಯತ್‌ಗೆ ತೆರಳಿದ ನೌಕರರು ಇಒ ಮೋಹನ್ ಅವರಿಗೆ ಮನವಿ ಸಲ್ಲಿಸಿದರು. ಬಳಿಕ ಉಪ ವಿಭಾಗ ಆಸ್ಪತ್ರೆಗೆ ತೆರಳಿ ಅಲ್ಲಿನ ಆಡಳಿತಾಧಿಕಾರಿ ಈಶ್ವರ ಸವುಡಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು.
ಆರೋಗ್ಯ ಇಲಾಖೆಯ ಹೊರಗುತ್ತಿಗೆ ನೌಕರರಿಂದ ಜಾಥಾದ ಮೂಲಕ ಪ್ರತಿಭಟನೆ.. ಈ ಸಂದರ್ಭದಲ್ಲಿ ಮಾತನಾಡಿದ ಈಶ್ವರ ಸವುಡಿ, ಈಗಾಗಲೇ ನಿಮ್ಮ ಹೋರಾಟಕ್ಕೆ ಸರ್ಕಾರ ಗುಣಾತ್ಮಕ ಸ್ಪಂದನೆ ನೀಡಿದೆ. ಮುಂದಿನ ಕೆಲ ದಿನಗಳಲ್ಲಿ ನಿಮ್ಮ ಬೇಡಿಕೆ ಈಡೇರಲಿದ್ದು, ಅಲ್ಲಿವರೆಗೂ ತಾಳ್ಮೆಯಿಂದ ಇರಬೇಕು ಎಂದು ಸಲಹೆ ನೀಡಿದರು.