ಮನೆ ಹಕ್ಕುಪತ್ರಕ್ಕಾಗಿ 17 ದಿನಗಳಿಂದ ಅಹೋರಾತ್ರಿ ಧರಣಿ ಬೆಳಗಾವಿ:ಮನೆಯ ಹಕ್ಕುಪತ್ರಕ್ಕಾಗಿಬೈಲಹೊಂಗಲ ಪಟ್ಟಣದ ಹರಳಯ್ಯ ಕಾಲೋನಿ ನಿವಾಸಿಗಳು ಕಳೆದ 17 ದಿನಗಳಿಂದ ಬೈಲಹೊಂಗಲ ಸಹಾಯಕ ಆಯುಕ್ತಧಿಕಾರಿ ಕಚೇರಿ ಮುಂದೆ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಕಳೆದ 50 ವರ್ಷಗಳಿಂದ ಹರಳಯ್ಯ ಕಾಲೋನಿಯಲ್ಲಿ ಮನೆ ಕಟ್ಟಿಕೊಂಡು ವಾಸವಿದ್ದು, ಆದರೆ ಈವರೆಗೂ ಜಿಲ್ಲಾಡಳಿತ, ಕೊಳಗೇರಿ ಅಭಿವೃದ್ಧಿ ಮಂಡಳಿ ಹಕ್ಕು ಪತ್ರ ವಿತರಿಸದೇ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿ ಧರಣಿಗೆ ಕುಳಿತ್ತಿದ್ದಾರೆ.
ಈ ಕಾಲೋನಿಯಲ್ಲಿ ಮನೆ ಕಟ್ಟಿಕೊಂಡಿರುವ ಸುಮಾರು 66 ಕುಟುಂಬಗಳು ಮನೆಯ ಹಕ್ಕಪತ್ರಕ್ಕಾಗಿ ಅಲೆದಾಡುತ್ತಿದ್ದಾರೆ. ಅಲ್ಲದೇ ಈ ಹಿಂದೆ ಇದೇ ಎಸಿ ಕಚೇರಿ ಮುಂದೆ ಎರಡು ಬಾರಿ ನಿರಂತರ ಧರಣಿ ನಡೆಸಿದ್ದರು. ಆಗಲೂ ಬೇಡಿಕೆ ಈಡೇರಿರಲಿಲ್ಲ. ಇದರಿಂದ ಈಗ ಮತ್ತೆ ಹೋರಾಟಕ್ಕೆ ಮುಂದಾಗಿದ್ದು, ಕಳೆದ 17 ದಿನಗಳಿಂದ ಅಹೋರಾತ್ರಿ ಧರಣಿ ಕೈಗೊಂಡಿದ್ದಾರೆ. ಮಹಿಳೆಯರು, ವಯಸ್ಸಾದ ಅಜ್ಜಿಯರು ಕೂಡ ಹಕ್ಕು ಪತ್ರಕ್ಕಾಗಿ ಕೊರೆಯುವ ಚಳಿಯನ್ನು ಲೆಕ್ಕಿಸದೇ ಹೋರಾಡುತ್ತಿದ್ದಾರೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮುಸ್ಲಿಂ ಸಮುದಾಯದವರೇ ಇಲ್ಲಿ ಹೆಚ್ಚು ವಾಸವಾಗಿದ್ದು, ನಮ್ಮಂಥ ಬಡವರಿಗೆ ಯಾಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಜಿಲ್ಲಾಡಳಿತ, ಕೊಳಗೇರಿ ಅಭಿವೃದ್ಧಿ ಮಂಡಳಿ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ನಮ್ಮ ಗೋಳು ಯಾರಿಗೂ ಕೇಳಿಸುತ್ತಿಲ್ಲ. ಹಕ್ಕು ಪತ್ರ ನಮ್ಮ ಕೈಗೆ ಸಿಕ್ಕ ಬಳಿಕವೇ ಪ್ರತಿಭಟನೆ ಹಿಂಪಡೆಯುತ್ತೇವೆ. ಇಲ್ಲದಿದ್ದರೆ ಇಲ್ಲೇ ಪ್ರಾಣ ಬಿಡುತ್ತೇವೆ ಎಂದು ಎಚ್ಚರಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಹೋರಾಟಗಾರ ಪರಶುರಾಮ ರಾಯಬಾಗ, ನಾವು ಬಡವ, ದಲಿತ, ಅಲ್ಪಸಂಖ್ಯಾತರಾಗಿ ಹುಟ್ಟಿದ್ದೆ ತಪ್ಪಾ..? ಈ ಹಿಂದೆ ಎರಡು ಬಾರಿ ಅಧಿಕಾರಿಗಳು ಭರವಸೆ ಕೊಟ್ಟಿದ್ದಕ್ಕೆ ಪ್ರತಿಭಟನೆ ಕೈ ಬಿಟ್ಟಿದ್ದೆವು. ಶಾಸಕರು, ಜಿಲ್ಲಾಧಿಕಾರಿ ಅವರಿಗೂ ಅನೇಕ ಬಾರಿ ಮನವಿ ಸಲ್ಲಿಸಿದರೂ ಏನೂ ಪ್ರಯೋಜನ ಆಗಿಲ್ಲ. ಶಾಸಕರು ನಮಗೆ ಮಲತಾಯಿ ಮಕ್ಕಳಂತೆ ನೋಡುತ್ತಿದ್ದಾರೆ. ಮೊದಲೇ ನಮ್ಮದು ಕೌಜಲಗಿ ಅವರದ್ದೇ ವಾರ್ಡ್ ಇದ್ರೂ ನಮಗೆ ನ್ಯಾಯ ಸಿಗುತ್ತಿಲ್ಲ. ಈಗಲೂ ನಮಗೆ ಸ್ಪಂದಿಸದಿದ್ದರೆ ಸೋಮವಾರದಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳುತ್ತೇವೆ. ನಮ್ಮ ಜೀವ ಹೋದರೂ ಚಿಂತೆ ಇಲ್ಲ ಎಂದು ಎಚ್ಚರಿಸಿದರು.
ಖುರ್ಷಿದ್ ಬಾನು ಸಯ್ಯದ್ ಎಂಬುವವರು ಮಾತನಾಡಿ, ಮನೆ - ಮಠ ಬಿಟ್ಟು ಚಳಿ, ಬಿಸಿಲು ಎನ್ನದೇ ಅಹೋರಾತ್ರಿ ಧರಣಿ ಮಾಡುತ್ತಿದ್ರೂ ಯಾರೊಬ್ಬರೂ ನಮ್ಮ ಕಡೆ ಲಕ್ಷ ವಹಿಸುತ್ತಿಲ್ಲ. ಮೊನ್ನೆ ಒಬ್ರು ಮೂರ್ಚೆ ಬಿದ್ದರು. ನಾವು ಇಲ್ಲೆ ಸತ್ತು, ಪುರಸಭೆಯವರು ಬೇಕಾದರೆ ನಮ್ಮ ಹೆಣ ತೆಗೆದುಕೊಂಡು ಹೋಗಲಿ. ನಮ್ಮ ಕೈಗೆ ಹಕ್ಕು ಪತ್ರ ಸಿಗೋವರೆಗೂ ಇಲ್ಲಿಂದ ಒಂದಿಂಚೂ ಕದಲುವುದಿಲ್ಲ ಎಂದು ಅಳಲು ತೋಡಿಕೊಂಡರು.
ಎಸಿ ಪ್ರಭಾವತಿ ಫಕೀರಪುರ ಮಾತನಾಡಿ, ಇವರ ವಿಚಾರ ಸ್ಲಂ ಬೋರ್ಡ್ನಲ್ಲಿದೆ. ಪ್ರತಿಯೊಂದು ಮನೆಯನ್ನು ಸರ್ವೇ ಮಾಡಬೇಕಿದೆ. ಇದಕ್ಕೆ ಇನ್ನು ಒಂದು ವಾರ ಬೇಕಾಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳ ಗಮನಕ್ಕೂ ತಂದಿದ್ದು, ಬರುವ 10 ದಿನಗಳಲ್ಲಿ ಇವರಿಗೆ ಹಕ್ಕು ಪತ್ರ ವಿತರಿಸುತ್ತೇವೆ. ದಯವಿಟ್ಟು ಪ್ರತಿಭಟನೆ ವಾಪಸ್ ಪಡೆಯಿರಿ ಎಂದು ಕೋರಿದರು.
ಇದನ್ನೂ ಓದಿ:ಗೋವಾಕ್ಕೆ ಹಾರಾಟ ನಡೆಸದ ಸ್ಟಾರ್ ಏರ್ಲೈನ್ಸ್; ಪ್ರಯಾಣಿಕರು ತರಾಟೆ ತೆಗೆದುಕೊಂಡ ವಿಡಿಯೋ ವೈರಲ್