ಬೆಳಗಾವಿ:ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸಿದ್ದ ರೈತರಿಗೆ ಬಾಕಿ ಬಿಲ್ ಪಾವತಿಸುವಂತೆ ಒತ್ತಾಯಿಸಿದ ರೈತರು ನಗರದ ಡಿಸಿ ಕಚೇರಿ ಎದುರು ಪ್ರತಿಭಟಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ ರೈತರು, ಮಲಪ್ರಭಾ ಸಕ್ಕರೆ ಕಾರ್ಖಾನೆಯಿಂದ ರೈತರಿಗೆ ಬಾಕಿ ಬಿಲ್ ಕೊಡಿಸುವುದಾಗಿ ಭರವಸೆ ನೀಡಿದ್ದ ಜಿಲ್ಲಾಧಿಕಾರಿಗಳು ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕೆಂದು ಒತ್ತಾಯಿಸಿದರು.
ಕಬ್ಬಿನ ಬಾಕಿ ಬಿಲ್ಗಾಗಿ ರೈತರಿಂದ ಧರಣಿ ಎಂ.ಕೆ. ಹುಬ್ಬಳ್ಳಿಯಲ್ಲಿರುವ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಿಂದ ಅಂದಾಜು 125 ಕೋಟಿ ಬಾಕಿ ಬಿಲ್ ಪಾವತಿಸಬೇಕಿದೆ. ಆದ್ರೀಗ, ಆಡಳಿತ ಮಂಡಳಿ ಚುನಾವಣೆ ನಡೆಸುತ್ತಿದ್ದು ಹಲವು ಮುಖಂಡರು ನಾಮುಂದು ತಾಮುಂದು ಎಂದು ಸ್ಪರ್ಧೆಗಿಳಿಯಲು ಹೊರಟಿದ್ದಾರೆ. ಆದ್ರೆ, ಯಾವೊಬ್ಬ ನಾಯಕರು ಕಬ್ಬಿನ ಬಾಕಿ ಬಿಲ್ ಕೊಡಿಸಲು ಮುಂದಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆಡಳಿತ ಮಂಡಳಿ ಚುನಾವಣೆಯಲ್ಲಿ ಗೆದ್ದು ಬರುವ ನಿರ್ದೇಶಕರು ಏನು ಕೆಲಸ ಮಾಡುತ್ತಾರೆ ಎಂಬುವುದನ್ನು ಹಲವು ವರ್ಷಗಳಿಂದ ನೋಡಿಕೊಂಡು ಬಂದಿದ್ದೇವೆ. ರೈತರಿಗೆ ಸರಿಯಾದ ಸಮಯದಲ್ಲಿ ಕಬ್ಬಿನ ಬಾಕಿ ಬಿಲ್ ಕೊಡಿಸಲು ವಿಫಲವಾಗಿದ್ದಾರೆ. ಹೀಗಾಗಿ ನಿರ್ದೇಶಕರ ಮೇಲೆ ನಮಗೆ ಯಾವ ನಂಬಿಕೆಯೂ ಇಲ್ಲ. ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಚುನಾವಣೆಯ ಅವಶ್ಯಕತೆ ಇರಲಿಲ್ಲ. ಈಗ ನಮ್ಮ ರೈತರು ತುಂಬಾ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾರೆ. ಹೀಗಾಗಿ ಜಿಲ್ಲಾಧಿಕಾರಿಗಳು ಮಧ್ಯಸ್ಥಿಕೆ ವಹಿಸಿಕೊಂಡು ತಕ್ಷಣ ಮುಖ್ಯಮಂತ್ರಿಗಳಿಂದ ನೆರವನ್ನು ಪಡೆದುಕೊಂಡು ಬಾಕಿ ಬಿಲ್ ಕೊಡಿಸಬೇಕೆಂದು ಮನವಿ ಮಾಡಿಕೊಂಡರು.