ಬೆಳಗಾವಿ: ಜಿಲ್ಲೆಯಲ್ಲಿನ ಹಳೇ ಆಟೋ ರಿಕ್ಷಾಗಳ ಪರ್ಮಿಟ್ ನವೀಕರಣ ಮಾಡುವಂತೆ ಒತ್ತಾಯಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜಿಲ್ಲಾ ಆಟೋ ರಿಕ್ಷಾ ಮಾಲೀಕರು ಹಾಗೂ ಚಾಲಕರ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.
ಹಳೇ ಆಟೋಗಳ ಪರ್ಮಿಟ್ ನವೀಕರಣಕ್ಕೆ ಆಗ್ರಹಿಸಿ ಪ್ರತಿಭಟನೆ - Auto drivers protest in Belgaum
ಕೊರೊನಾ ಎಫೆಕ್ಟ್ನಿಂದ ಆಟೋ ಚಾಲಕರ ಬದುಕು ಸಹ ದುಸ್ತರವಾಗಿದ್ದು, ಈಗ ಪರ್ಮಿಟ್ ವಿಚಾರದಲ್ಲಿ ತಮಗೆ ಆಗುತ್ತಿರುವ ಸಮಸ್ಯೆ ಸರಿಪಡಿಸುವಂತೆ ಆಟೋ ಚಾಲಕರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ನಗರದಲ್ಲಿ ಅಂದಾಜು 7,000 ಸಾವಿರ ಆಟೋ ರಿಕ್ಷಾಗಳಿವೆ. ಆ ಪೈಕಿ 500ರಿಂದ 1000 ಆಟೋ ರಿಕ್ಷಾಗಳು ಪರ್ಮಿಟ್ ಇಲ್ಲದೇ ಓಡಾಡುತ್ತಿವೆ. ಆದರೆ ಸಾರಿಗೆ ಅಧಿಕಾರಿಗಳು ಮಾತ್ರ ಪರ್ಮಿಟ್ ನವೀಕರಣ ಮಾಡುತ್ತಿಲ್ಲ ಎಂದು ಆರೋಪಿಸಿದರು. ಈಗಿರುವ ಆಟೋ ರಿಕ್ಷಾಗಳು ಹಳೆಯದ್ದಾಗಿದ್ದರಿಂದ ಸಾರಿಗೆ ಅಧಿಕಾರಿಗಳು ಹೊಸ ಪರ್ಮಿಟ್ ನೀಡುತ್ತಿಲ್ಲ. ಆದ್ರೆ ಆಟೋ ಚಾಲಕರಿಗೆ ಇದನ್ನು ಬಿಟ್ಟು ಬೇರೆ ಉದ್ಯೋಗವಿಲ್ಲ.
ಸದ್ಯ ಕೊರೊನಾ ಸಂಕಷ್ಟಕ್ಕೆ ಒಳಗಾಗಿರುವ ನಮಗೆ 50,000ರಿಂದ 70,000 ರೂ. ಹಣ ನೀಡಿ ಹೊಸ ಆಟೋ ರಿಕ್ಷಾ ಖರೀದಿಸಲು ಸಾಧ್ಯವಿಲ್ಲ. ಹೀಗಾಗಿ ಹಳೇ ಆಟೋ ರಿಕ್ಷಾಗಳೇ ಜೀವನಕ್ಕೆ ಆಧಾರವಾಗಿವೆ. ನವೀಕರಣ ಪರ್ಮಿಟ್ ನೀಡದಿದ್ದರೆ ದುಡಿದು ತಿನ್ನುವ ಚಾಲಕರ ಬದುಕು ದುಸ್ತರವಾಗಲಿದೆ. ಹೀಗಾಗಿ ಹಳೇ ಆಟೋ ರಿಕ್ಷಾಗಳ ಪರ್ಮಿಟ್‌ಗಳನ್ನು ನವೀಕರಣ ಮಾಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.