ಬೆಳಗಾವಿ : ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿ ಜಮೀನು ಕಳೆದುಕೊಂಡು 43 ವರ್ಷ ಕಳೆದರೂ ಪರಿಹಾರ ಸಿಗದ ಹಿನ್ನೆಲೆಯಲ್ಲಿ ನ್ಯಾಯಕ್ಕೆ ಆಗ್ರಹಿಸಿ ಬೆಳಗಾವಿಯ ಡಿಸಿ ಕಚೇರಿ ಮುಂಭಾಗದಲ್ಲಿ ಸಂತ್ರಸ್ಥರು ಅನಿರ್ಧಿಷ್ಟಾವಧಿ ಧರಣಿಗೆ ಮುಂದಾಗಿದ್ದಾರೆ. ಹುಕ್ಕೇರಿ ತಾಲೂಕಿನ ಬೀರನಹಳ್ಳಿ, ಮನಗುತ್ತಿ, ಇಸ್ಲಾಂಪೂರ, ಗುಡಗನಟ್ಟಿ, ಹಳೇ ವಂಟಮೂರಿ ಸೇರಿ ಇನ್ನಿತರ ಗ್ರಾಮಗಳ ನೊಂದ ಜನರು ಇಂದು ಬೆಳಗಾವಿಯ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ರ‍್ಯಾಲಿ ನಡೆಸಿದರು.
ಬಳಿಕ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಆರಂಭಿಸಿದರು. ಹಿಡಕಲ್ ಡ್ಯಾಂಗೆ ಹೊಲ, ಮನೆ ಕಳೆದುಕೊಂಡು ಭೀಕ್ಷೆ ಬೇಡುತ್ತಿದ್ದೇವೆ. ಭೂಮಿ ನೀಡದಿದ್ದರೆ ಸಾಯುವುದು ಖಚಿತ, ಜಮೀನು ಪರಿಹಾರ ನೀಡಿ ಇಲ್ಲದಿದ್ದರೆ ವಿಷ ನೀಡಿ ಸಾಯಿಸಿರಿ ಎಂಬ ಎಚ್ಚರಿಕೆ ಫಲಕಗಳನ್ನು ಪ್ರದರ್ಶಿಸಿ, ಹಲಗಿ ಬಾರಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಮಾತನಾಡಿ, ಕಳೆದ 43 ವರ್ಷಗಳಿಂದ 58 ಕುಟುಂಬಸ್ಥರು ಕಚೇರಿಯಿಂದ ಕಚೇರಿಗೆ ಅಲೆದಾಡಿದರೂ ಪರಿಹಾರ ಮಾತ್ರ ಸಿಕ್ಕಿಲ್ಲ. ರಾಜ್ಯ ಸರ್ಕಾರ ಜಮೀನು ಮಂಜೂರು ಮಾಡಿದೆ. ಆದರೆ, ಪಹಣಿ ಪತ್ರವನ್ನು ಅಧಿಕಾರಿಗಳು ತೋರಿಸುತ್ತಿಲ್ಲ. ಬರುವ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ಮಾಡಿ ಸಂತ್ರಸ್ತರಿಗೆ ಪರಿಹಾರ ಕೊಡಿಸಬೇಕು. ಪರಿಹಾರ ನೀಡುವವರೆಗೂ ಇಂದಿನಿಂದ ಡಿಸಿ ಕಚೇರಿ ಮುಂದೆ ಅನಿರ್ಧಿಷ್ಟಾವಧಿಯವರೆಗೆ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ಕೊಟ್ಟರು.