ಬೆಳಗಾವಿ: ಇಲ್ಲಿನ ಮಹಾನಗರ ಪಾಲಿಕೆಯ ಚುನಾವಣೆ ಫಲಿತಾಂಶ ಬಂದು ಇಂದಿಗೆ ಬರೋಬ್ಬರಿ ಒಂದು ವರ್ಷವಾಗಿದೆ. ಕಾರ್ಪೊರೇಟರ್‌ಗಳ ಆಯ್ಕೆಯಾಗಿ ಒಂದು ವರ್ಷ ಕಳೆದಿದೆ. ಬಿಜೆಪಿ ಪಕ್ಷಕ್ಕೆ ಸ್ಪಷ್ಟ ಬಹುಮತ ಬಂದರೂ ಈ ವರೆಗೂ ಪಾಲಿಕೆಯ ಮೇಯರ್ ಉಪಮೇಯರ್ ಚುನಾವಣೆ ನಡೆದಿಲ್ಲ. ಇದರಿಂದಾಗಿ ಕಾರ್ಪೊರೇಟರ್‌ಗಳಿಗೆ ಅಧಿಕಾರ ಭಾಗ್ಯ ಸಿಕ್ಕಿಲ್ಲ. ಈ ಬಗ್ಗೆ ಅವಕಾಶ ವಂಚಿತ ಪಾಲಿಕೆ ಸದಸ್ಯರು ಕೇಕ್ ಕತ್ತರಿಸಿ ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು.
ಬೆಳಗಾವಿ ಪಾಲಿಕೆಯಲ್ಲಿ ವರ್ಷವಾದರೂ ಸಿಗದ ಅಧಿಕಾರ.. ಕೇಕ್ ಕಟ್ ಮಾಡಿ ಸದಸ್ಯರಿಂದ ಪ್ರತಿಭಟನೆ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ನಡೆದು ಒಂದು ವರ್ಷ ಕಳೆದಿದ್ದು, 58 ವಾರ್ಡ್‌ಗಳ ಪೈಕಿ 35 ಸ್ಥಾನಗಳಲ್ಲಿ ಬಿಜೆಪಿ ಗೆದ್ದು ಸ್ಪಷ್ಟ ಬಹುಮತ ಪಡೆದಿದೆ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದರೂ, ಸ್ಪಷ್ಟ ಬಹುಮತ ಪಡೆದ ಬಿಜೆಪಿಗೆ ಮಹಾನಗರ ಪಾಲಿಕೆ ಮೇಯರ್ ಉಪಮೇಯರ್ ಚುನಾವಣೆ ಮಾಡಲಾಗುತ್ತಿಲ್ಲ.
ಜೊತೆಗೆ ಮಹಾನಗರ ಪಾಲಿಕೆಯ ಸದಸ್ಯರಿಗೆ ಪ್ರಮಾಣ ವಚನ ಸ್ವೀಕರಿಸುವ ಭಾಗ್ಯವೂ ಒದಗಿಬಂದಿಲ್ಲ. ಮೇಯರ್ ಉಪಮೇಯರ್ ಮೀಸಲಾತಿ ವಿಚಾರವಾಗಿ ಗೊಂದಲ ಮುಂದುವರಿದಿದ್ದು ಇನ್ನೂ ಚುನಾವಣೆ ನಡೆದಿಲ್ಲ. ಇದರಿಂದ ಬೇಸತ್ತ ಕಾಂಗ್ರೆಸ್, ಎಐಎಂಐಎಂ, ಎಂಇಎಸ್, ಪಕ್ಷೇತರ ಪಾಲಿಕೆ ಸದಸ್ಯರು ಇಂದು ಮಹಾನಗರ ಪಾಲಿಕೆ ಕಚೇರಿಗೆ ನುಗ್ಗಿ ಕೇಕ್ ಕಟ್ ಮಾಡಿ ವಿಶಿಷ್ಟವಾಗಿ ಪ್ರತಿಭಟಿಸಲು ಯತ್ನಿಸಿದರು.
ಈ ವೇಳೆ ಪ್ರತಿಭಟನಾಕಾರರು ಪೊಲೀಸರು ಮತ್ತು ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ್ ಘಾಳಿ ಜೊತೆ ವಾಗ್ವಾದ ನಡೆಸಿದರು. ಬಳಿಕ ಪ್ರತಿಭಟನಾಕಾರರು ಪಾಲಿಕೆ ಕಚೇರಿ ಮುಂಭಾಗದಲ್ಲಿ ಕೇಕ್ ಕತ್ತರಿಸಿ ತಮ್ಮ ಆಕ್ರೋಶ ಹೊರಹಾಕಿದರು.
ಗೆದ್ದು ಒಂದು ವರ್ಷ ಕಳೆದರೂ ಇಲ್ಲ ಅಧಿಕಾರ ಭಾಗ್ಯ :ಅಧಿಕಾರ ಇಲ್ಲದೇ ಒಂದು ವರ್ಷ ಕಳೆದು ಹೋಯಿತು. ಈ ವರ್ಷವಾದರೂ ಅಧಿಕಾರದ ಭಾಗ್ಯ ಸಿಗುತ್ತಾ ಅನ್ನೋದು ಗೊತ್ತಿಲ್ಲ. ಮಳೆಯಿಂದ ವಾರ್ಡ್‌ಗಳಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆಯೂ ಇಲ್ಲದೇ ಜನರ ಪರದಾಡುತ್ತಿದ್ದಾರೆ. ನಮ್ಮ ವಾರ್ಡ್‌ಗಳಲ್ಲಿ ಯಾವುದೇ ಕೆಲಸ ಆಗ್ತಿಲ್ಲ ಎಂದು ಜನ ನಮ್ಮನ್ನು ಕೇಳುತ್ತಿದ್ದಾರೆ. ಅಧಿಕಾರ ಇಲ್ಲದೆ ಏನೂ ಮಾಡಲು ಸಾಧ್ಯವಿಲ್ಲ ಎಂದು ಪಾಲಿಕೆ ಸದಸ್ಯೆ ಲಕ್ಷ್ಮೀ ಆಕ್ರೋಶ ಹೊರಹಾಕಿದ್ದಾರೆ.
ಅದೇನೇ ಇರಲಿ ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಮೀಸಲಾತಿ ಗೊಂದಲವನ್ನು ಸರ್ಕಾರ ಬೇಗ ಪರಿಹರಿಸಬೇಕಿದೆ. ಕಾರ್ಪೊರೇಟರ್‌ಗಳಿಗೆ ಅಧಿಕಾರ ನೀಡಿ ತಮ್ಮ ತಮ್ಮ ವಾರ್ಡ್‌ಗಳಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ :ಶಿವಮೊಗ್ಗ ಪಾಲಿಕೆ ಮೇಯರ್ ಚುನಾವಣೆ ವೇಳಾಪಟ್ಟಿಗೆ ವಿಧಿಸಿದ್ದ ನಿರ್ಬಂಧ ವಿಸ್ತರಿಸಿದ ಹೈಕೋರ್ಟ್