ಗಂಗಾವತಿ: ಎರಡು ದಿನದಲ್ಲಿ ಕೆಲಸಕ್ಕೆ ಹಾಜರಾಗದಿದ್ದಲ್ಲಿ ಕೆಲಸದಿಂದ ವಜಾ ಮಾಡುವುದಾಗಿ ಸರ್ಕಾರ ಆರೋಗ್ಯ ಇಲಾಖೆಯ ಮೂಲಕ ಬೆದರಿಕೆ ಹಾಕುವ ಕೆಲಸಕ್ಕೆ ಕೈ ಹಾಕಿದೆ ಎಂದು ಆರೋಪಿಸಿ ಆರೋಗ್ಯ ಇಲಾಖೆಯ ನೂರಾರು ಹೊರಗುತ್ತಿಗೆಯ ನೌಕರರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಇಲ್ಲಿನ ಉಪ ವಿಭಾಗ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು 120ಕ್ಕೂ ಹೆಚ್ಚು ಹೊರಗುತ್ತಿಗೆ ನೌಕರರು, ಹಿರಿಯ ವೈದ್ಯ ನಾಗರಾಜ್ ಅವರ ನೇತೃತ್ವದಲ್ಲಿ ಸರ್ಕಾರ ವಜಾಗೊಳಿಸುವ ಬೆದರಿಕೆಯ ಆದೇಶದ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದರು.
ಆರೋಗ್ಯ ಇಲಾಖೆಯ ನೂರಾರು ಹೊರಗುತ್ತಿಗೆಯ ನೌಕರರು ನಗರದಲ್ಲಿ ಪ್ರತಿಭಟನೆ ನಡೆಸಿದರು. ನಮ್ಮ ಬಲವನ್ನು ಕುಗ್ಗಿಸುವ ನಿಟ್ಟಿನಲ್ಲಿ ಸರ್ಕಾರ ಕೈಹಾಕಿರುವುದು ಸರಿಯಲ್ಲ ಎಂದು ಆರೋಪಿಸಿದ ಧರಣಿಕಾರರು ಶಾಸಕ ಪರಣ್ಣ ಮುನವಳ್ಳಿ ಮೂಲಕ ಸರ್ಕಾರಕ್ಕೆ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮನವಿ ಸಲ್ಲಿಸಿದರು.
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಈ ಎರಡು ಇಲಾಖೆಯಲ್ಲಿ ಕಳೆದ ಹತ್ತು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದೇವೆ. ಬಹುತೇಕ ಸರ್ಕಾರಿ ಆಸ್ಪತ್ರೆಗಳು ನಮ್ಮಿಂದ ನಡೆಯುತ್ತಿವೆ. ಶೇ. 60ರಷ್ಟು ಉದ್ಯೋಗಿಗಳು ಇದ್ದೇವೆ. ಆದರೆ, ಇಲಾಖೆ ಮಾತ್ರ ನಮ್ಮ ನ್ಯಾಯೋಚಿತ ಬೇಡಿಕೆಗೆ ಮಣೆ ಹಾಕುತ್ತಿಲ್ಲ ಎಂದು ಧರಣಿಕಾರರು ವಿವರಣೆ ನೀಡಿದರು.