ಬೆಳಗಾವಿ: ಖಾಯಂ ಉದ್ಯೋಗ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ಮಹಾನಗರ ಪಾಲಿಕೆ ಹೊರಗುತ್ತಿಗೆ ಪೌರ ಕಾರ್ಮಿಕರು ದಿಢೀರ್ ರಸ್ತೆ ತಡೆದು ಪ್ರತಿಭಟಿಸಿದರು.
ನಗರದ ಚೆನ್ನಮ್ಮ ವೃತ್ತದಲ್ಲಿ ಪೌರಕಾರ್ಮಿಕರು ರಸ್ತೆ ತಡೆದ ಕಾರಣ ಸಂಚಾರ ಅಸ್ತವ್ಯಸ್ತವಾಯಿತು. ಚೆನ್ನಮ್ಮ ವೃತ್ತದಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಕಸ ಸಾಗಿಸುವ ಹೊರಗುತ್ತಿಗೆ ವಾಹನ ಚಾಲಕರು, ಕ್ಲೀನರ್‌ಗಳು, ಕಸ ನಿರ್ವಹಣೆ ಸಹಾಯಕರು, ಒಳಚರಂಡಿ ಕಾರ್ಮಿಕರು ಹಾಗು ಸ್ಮಶಾನ ಕಾವಲುಗಾರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ನೇರ ವೇತನ, ಮಹಿಳಾ ಪೌರಕಾರ್ಮಿಕರಿಗೆ ಶೌಚಾಲಯ, ಕುಡಿಯುವ ನೀರು, ಹೆರಿಗೆ ಭತ್ಯೆ, ಹೆರಿಗೆ ರಜೆ, ವಿಶ್ರಾಂತಿ ಗೃಹದಂತಹ ಮೂಲಭೂತ ಸೌಲಭ್ಯ ಒದಗಿಸಬೇಕು. ಪೌರಕಾರ್ಮಿಕರಿಗಾಗಿ ಜಾರಿ ಮಾಡಿರುವ ಗೃಹ ಭಾಗ್ಯ ಯೋಜನೆಗೆ ಹೊರಗುತ್ತಿಗೆ ಪೌರಕಾರ್ಮಿಕರು, ಮನೆ-ಮನೆ ಕಸ ಸಂಗ್ರಹಿಸುವ ಪೌರಕಾರ್ಮಿಕರು, ಒಳಚರಂಡಿ ಸ್ವಚ್ಛತಾ ಕಾರ್ಮಿಕರು, ಲೋಡರ್, ಕಸ ವಾಹನದ ಚಾಲಕರು, ಸಹಾಯಕರನ್ನು ಸೇರಿಸಬೇಕು. ಹೊರಗುತ್ತಿಗೆ ಪೌರಕಾರ್ಮಿಕರ ಮಕ್ಕಳು ಖಾಸಗಿ ಶಾಲೆ, ಕಾಲೇಜುಗಳಲ್ಲಿಯೂ ವ್ಯಾಸಂಗ ಮಾಡಲು ಅಗತ್ಯವಿರುವ ಹಣಕಾಸಿನ ನೆರವು ನೀಡಬೇಕು. ಪಿಂಚಣಿ, ಅವಲಂಬಿತರಿಗೆ ಉದ್ಯೋಗ ನೀಡಬೇಕು. ಆರೋಗ್ಯ ಭದ್ರತೆಗಾಗಿ ಆರೋಗ್ಯ ಕಾರ್ಡ್ ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.
ಇದನ್ನೂ ಓದಿ:ಬೆಂಗಳೂರು: ಮಗು ಕೊಂದು ಡೆತ್‌ನೋಟ್ ಬರೆದಿಟ್ಟು ಮಹಿಳೆ ಆತ್ಮಹತ್ಯೆ
ಬಳಿಕ ಮಾತನಾಡಿದ ಪೌರಕಾರ್ಮಿಕರು, ಗುತ್ತಿಗೆ ತೆಗೆದುಕೊಂಡ ಟೆಂಡರ್ನವರು ಸರಿಯಾಗಿ ಸಂಬಳ ಕೊಡೋದಿಲ್ಲ. ಬಿಲ್ ಆಗಿಲ್ಲ ಅಂತಾ ಸಬೂಬು ಕೊಡುತ್ತಾರೆ. ಪಾಲಿಕೆಯವರನ್ನು ಕೇಳಿದ್ರೆ ಬಿಲ್ ಆಗಿದೆಯೆಂದು ಹೇಳ್ತಾರೆ. ಆದ್ರೆ ನಮಗೆ 11,000 ರೂ. ಸಂಬಳ ಬರುತ್ತದೆ. ಒಂದು ದಿನ ರಜೆ ಮಾಡಿದ್ರೆ ಎರಡು ರಜೆ, ಎರಡು ಇದ್ರೆ ನಾಲ್ಕು ರಜೆ ಹಾಕುತ್ತಾರೆ. ಹೀಗಾದರೆ ನಾವು ಹೇಗೆ ಜೀವನ ನಡೆಸೋದು ಎಂದು ಅಳಲು ತೋಡಿಕೊಂಡರು. ಒಂದು ವೇಳೆ ಸರ್ಕಾರ ನಮ್ಮ ಬೇಡಿಕೆ ಈಡೇರಿಸದಿದ್ದರೆ ನಿರಂತರ ಹೋರಾಟ ನಡೆಸಲಾಗುತ್ತದೆಯೆಂದು ಎಚ್ಚರಿಕೆ ನೀಡಿದ್ದಾರೆ.