ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಂ.ಜೈನೇಖಾನ್ ಮಾತನಾಡಿದರು. ಬೆಳಗಾವಿ:ಕಾರ್ಮಿಕರಿಗೆ ಕನಿಷ್ಠ ಕೂಲಿ, ರೈತರ ಬೆಳೆಗಳಿಗೆ ಬೆಂಬಲ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು (ಬುಧವಾರ) ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಕೇಂದ್ರ ಸರ್ಕಾರ ಜನ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ಕರ್ನಾಟಕ ಪ್ರಾಂತ ಕೃಷಿ ಕೂಲಿ ಕಾರ್ಮಿಕರ ಸಂಘದ ಆಶ್ರಯದಲ್ಲಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನದಿಂದ ರಾಣಿ ಚನ್ನಮ್ಮ ವೃತ್ತ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಂ.ಜೈನೇಖಾನ್ ಮಾತನಾಡಿ, ''ರೈತರಿಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ಒಂಬತ್ತು ವರ್ಷದಲ್ಲಿ 800 ರೂ. ಸಿಲಿಂಡರ್ ಬೆಲೆ ಏರಿಕೆ ಆಗಿರುವುದು 'ಅಚ್ಛೇ ದಿನ್'. ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಮಾಡುತ್ತಿರುವಾಗ ನಿಮ್ಮ ಬೇಟಿ ಬಚಾವ್, ಬೇಟಿ ಪಡಾವ್ ಘೋಷಣೆ ಎಲ್ಲಿ ಹೋಯ್ತು? ಮಣಿಪುರ ಹೊತ್ತಿ ಉರಿಯುತ್ತಿದ್ದರೂ ಕೂಡಾ ಪ್ರಧಾನಿ ಮೋದಿ ವಿದೇಶ ಪ್ರವಾಸ ಮಾಡುತ್ತಿದ್ದರು. ಇದರಿಂದ ಮೋದಿ ಚಲೇಜಾವ್ ಚಳುವಳಿ ಮಾಡಬೇಕಿದೆ'' ಎಂದರು.
''ಆಗಸ್ಟ್ 9ರಂದು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳುವಳಿ ಆರಂಭಿಸಿದ್ದ ದಿನ. ಆ ನಿಮಿತ್ತ ಕೇಂದ್ರ ಸರ್ಕಾರ ಕಾರ್ಮಿಕ, ಮಹಿಳಾ ಹಾಗೂ ರೈತ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ ಮಾಡುತ್ತಿದ್ದೇವೆ. ಖಾಸಗೀಕರಣ ಹೆಸರಿನಲ್ಲಿ ಮೋದಿ ಸರ್ಕಾರ ಇಡೀ ದೇಶವನ್ನೇ ಮಾರಾಟ ಮಾಡುತ್ತಿದೆ. ಹಿಂದೆ ವಾಸ್ಕೋಡಿ ಗಾಮಾ ಭಾರತಕ್ಕೆ ಬಂದಂತೆ ಈಗ ಅದೇ ರೂಪದಲ್ಲಿ ಬಂದಿರುವ ಮೋದಿ ಭಾರತ ದೇಶವನ್ನು ಮಾರಾಟ ಮಾಡಲು ನಿಂತಿದ್ದಾರೆ" ಎಂದು ಅವರು ಇದೇ ವೇಳೆ ಕಿಡಿಕಾರಿದರು.
''ದುಡಿಯುವ ಜನರಿಗೆ ಕನಿಷ್ಠ ವೇತನ ನಿಗದಿಪಡಿಸಬೇಕು. ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡುವ ನಿಟ್ಟಿನಲ್ಲಿ ಸ್ವಾಮಿನಾಥನ್ ಆಯೋಗದ ವರದಿ ಜಾರಿಗೊಳಿಸಬೇಕು. ದೇಶದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಆಗ್ರಹಿಸಿದ ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಮೂಲಕ ಪ್ರಧಾನಮಂತ್ರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಸಿಐಟಿಯು ಮುಖಂಡರಾದ ಜಿ.ವಿ. ಕುಲಕರ್ಣಿ, ದಿಲೀಪ ವಾರ್ಕೆ, ಎಲ್.ಎಸ್. ನಾಯಿಕ, ಸಿ.ಎ. ಖರಾಡೆ, ದೊಡ್ಡವ್ವ ಪೂಜಾರಿ, ಮಂದಾ ನೇವಗಿ, ಚನ್ನಮ್ಮ ಗಡ್ಕರಿ ಸೇರಿದಂತೆ ಇತರರು ಇದ್ದರು.
ಇದನ್ನೂ ಓದಿ:'ಸರ್ಕಾರದ ರೈತ ವಿರೋಧಿ ಧೋರಣೆ': ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ; ಸಿ.ಟಿ.ರವಿ ಸೇರಿ ಹಲವರು ವಶಕ್ಕೆ