ಕರ್ನಾಟಕ

karnataka

ETV Bharat / state

ಬೆಳಗಾವಿಯಲ್ಲಿ ಕರವೇ ಪ್ರತಿಭಟನೆ: 'ಮಹಾ' ಲಾರಿಗಳಿಗೆ ಕಲ್ಲು, ಹಲವರು ಪೊಲೀಸ್ ವಶಕ್ಕೆ - ಈಟಿವಿ ಭಾರತ ಕನ್ನಡ

ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

karave-protest-at-belagavi-police-arrested-karave-karyakarthas
ಬೆಳಗಾವಿಯಲ್ಲಿ ಕರವೇ ಕಾರ್ಯಕರ್ತರು ಪೊಲೀಸರ ವಶಕ್ಕೆ

By

Published : Dec 6, 2022, 3:13 PM IST

Updated : Dec 6, 2022, 4:17 PM IST

ಬೆಳಗಾವಿ:ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ತಾರಕಕ್ಕೇರಿದೆ. ಮಹಾರಾಷ್ಟ್ರ ನೋಂದಣಿ ಲಾರಿಗಳ ಮೇಲೆ ಕಲ್ಲು ತೂರಾಟ ನಡೆಸಿ ಕರ್ನಾಟಕ ರಕ್ಷಣಾ ವೇದಿಕೆ(ಕರವೇ) ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಕಲ್ಲು ತೂರಾಟ ನಡೆಸಿದ ಕಾರ್ಯಕರ್ತರು ಮತ್ತು ಸಂಘಟನೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ ಅವರನ್ನು ಬೆಳಗಾವಿ ಪೊಲೀಸರು ವಶಕ್ಕೆ ಪಡೆದರು.

ನಾರಾಯಣ ಗೌಡ ನೇತೃತ್ವದಲ್ಲಿ ಬೆಳಗಾವಿ ನಗರದವರೆಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಈ ಮೆರವಣಿಗೆ ಬೆಳಗಾವಿ ನಗರ ಪ್ರವೇಶಿಸುವ ಮೊದಲೇ ಟೋಲ್ ನಾಕಾ ಬಳಿ ಕಾರ್ಯಕರ್ತರನ್ನು ಪೊಲೀಸರು ತಡೆದರು.

ಮಹಾರಾಷ್ಟ್ರದ ಲಾರಿಗಳಿಗೆ ಕಲ್ಲು ತೂರಾಟ: ಹಿರೇಬಾಗೆವಾಡಿ ಟೋಲ್ ನಾಕಾ ಬಳಿಯಲ್ಲಿ ಮಹಾರಾಷ್ಟ್ರ ನೊಂದಣಿ ಇರುವ ಲಾರಿಗಳಿಗೆ ಮಸಿ ಬಳಿದು ಗಾಜು ಒಡೆದರು. ಪುಣೆಯಿಂದ ಬೆಂಗಳೂರಿಗೆ ಹೊರಟಿದ್ದ ಲಾರಿಗಳನ್ನು ತಡೆದು ಮಹಾರಾಷ್ಟ್ರ ನೋಂದಣಿಯ ಹತ್ತಕ್ಕೂ ಅಧಿಕ ಲಾರಿಗಳ ನಂಬರ್ ಪ್ಲೇಟ್‌ ಕಿತ್ತು ಹಾಕಿ ಮಸಿ ಬಳಿಯಲಾಯಿತು. ಕೂಡಲೇ ಪ್ರತಿಭಟನಾಕಾರರನ್ನು ತಡೆದ ಪೊಲೀಸರು ಲಾರಿಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು‌.

ಬೆಳಗಾವಿಯಲ್ಲಿ ಕರವೇ ಪ್ರತಿಭಟನೆ

ಕರವೇ ಕಾರ್ಯಕರ್ತರು ಪೊಲೀಸ್ ವಶಕ್ಕೆ: ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಪೊಲೀಸರು ನಾರಾಯಣ ಗೌಡ ಸೇರಿದಂತೆ ನೂರಾರು ಕಾರ್ಯಕರ್ತರನ್ನು ವಶಕ್ಕೆ ಪಡೆದರು. ಈ ವೇಳೆ ಪೊಲೀಸ್ ವಾಹನವೇರಿದ ಕಾರ್ಯಕರ್ತರು, ರಕ್ತವನ್ನು ಚೆಲ್ಲುತ್ತೇವೆ ನ್ಯಾಯವನ್ನು ಕೇಳುತ್ತೇವೆ, ಸ್ನೇಹಕ್ಕೂ ಬದ್ಧ ಸಮರಕ್ಕೂ ಸಿದ್ಧ ಹಾಗೂ ಯಾರಪ್ಪಂದ ಏನೈತಿ ಬೆಳಗಾವಿ ನಮ್ದೈತಿ ಎಂದೆಲ್ಲಾ ಘೋಷಣೆಗಳನ್ನು ಕೂಗಿದರು. ಕೆಲವರು ರಸ್ತೆ ಮೇಲೆಯೇ ಮಲಗಿ ಪ್ರತಿಭಟನೆ ನಡೆಸಿದರೆ ಇನ್ನೂ ಕೆಲವರು ಪೊಲೀಸ್ ವಾಹನವೇರಿ ಕೈಯಲ್ಲಿ ಬಾವುಟ ಹಿಡಿದು ಘೋಷಣೆ ಮೊಳಗಿಸುತ್ತಿದ್ದರು.

ಸರ್ಕಾರದಿಂದ ನಮ್ಮ ಹೋರಾಟ ಹತ್ತಿಕ್ಕುವ ಪ್ರಯತ್ನ: ನಾರಾಯಣ ಗೌಡ ಮಾತನಾಡಿ, 'ಇವತ್ತು ಪೊಲೀಸರು ನಮ್ಮನ್ನು ಅರೆಸ್ಟ್ ಮಾಡಿದ್ದಾರೆ. ಇವತ್ತು ಒಂದಿನ ನಮ್ಮನ್ನು ತಡೆಯಬಹುದು. ಆದರೆ, ಇದು ಒಂದು ದಿನದ ಚಳುವಳಿ ಅಲ್ಲ. ಕರವೇ ಕಾರ್ಯಕರ್ತರನ್ನು ಬಂಧಿಸಿರುವುದನ್ನು ಧಿಕ್ಕರಿಸಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುತ್ತಿದೆ. ಸರ್ಕಾರ ಇವತ್ತು ಪೊಲೀಸರನ್ನು ಮುಂದಿಟ್ಟುಕೊಂಡು ನಮ್ಮನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಸರ್ಕಾರ ನಮ್ಮ ಚಳುವಳಿ ಹತ್ತಿಕ್ಕಿದ್ರೆ ನಾವು ನಮ್ಮ ಹೋರಾಟ ಇಷ್ಟಕ್ಕೆ ಬಿಡಲ್ಲ. ಸರ್ಕಾರಕ್ಕೆ ತಕ್ಕ ಶಾಸ್ತಿ ಮಾಡ್ತೇವೆ' ಎಂದು ಎಚ್ಚರಿಕೆ ನೀಡಿದರು. ಇದೇ ವೇಳೆ, ಅಧಿವೇಶನದಲ್ಲಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕುವ ಬಗ್ಗೆ ಕುಳಿತು ಚರ್ಚೆ ಮಾಡುತ್ತೇವೆ ಎಂದರು.

ಬೆಳಗಾವಿ ಜಿಲ್ಲಾ ವೇದಿಕೆಯ ಅಧ್ಯಕ್ಷ ದೀಪಕ ಗುಡಗನಟ್ಟಿ ಮಾತನಾಡಿ, 'ಗಡಿ ವಿವಾದ ಕುರಿತು ಮಹಾರಾಷ್ಟ್ರ ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಿದೆ. ಈ ಮಧ್ಯೆ ಅಲ್ಲಿನ ಜನಪ್ರತಿನಿಧಿಗಳು ರಾಜಕೀಯಪ್ರೇರಿತ ಹೇಳಿಕೆಗಳನ್ನು ನೀಡುತ್ತ ಗಡಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರಲು ಯತ್ನಿಸುತ್ತಿದ್ದಾರೆ. ಇದು ಸರಿಯಲ್ಲ' ಎಂದು ಹೇಳಿದರು.

ಇದನ್ನೂ ಓದಿ:ಬೆಳಗಾವಿ ಪ್ರವೇಶಕ್ಕೆ ಕನ್ನಡಪರ ಹೋರಾಟಗಾರರಿಗೆ ಪೊಲೀಸರ ತಡೆ.. ಗಡಿಯಲ್ಲಿ ಹೆಚ್ಚಿದ ತಿಕ್ಕಾಟ

Last Updated : Dec 6, 2022, 4:17 PM IST

ABOUT THE AUTHOR

...view details