ಅಥಣಿ: ರಾಜ್ಯ ಸರ್ಕಾರ ಜಾರಿಗೆ ತರುತ್ತಿರುವ ಭೂಸುಧಾರಣೆ ತಿದ್ದುಪಡಿ ಕಾಯ್ದೆ ವಿರುದ್ಧ ರಾಜ್ಯ ಪ್ರತಿಭಟನೆ ಪೂರ್ವಭಾವಿ ಸಭೆಯನ್ನು ಅಥಣಿ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಭಾರತೀಯ ಕಿಸಾನ್ ಸಂಘದ ವತಿಯಿಂದ ರೂಪು ರೇಷೆಗಳ ಕುರಿತು ಚರ್ಚಿಸಲಾಯಿತು.
ಈ ವೇಳೆ ಮಾತನಾಡಿದ ರಾಜ್ಯ ರೈತಸಂಘ ಸಂಚಾಲಕ ಚನ್ನಪ್ಪ ಪೂಜಾರಿ, ಕೊರೊನಾ ಎಂದು ನಾವು ಮನೆಯಲ್ಲಿ ಕುಳಿತಿರುವ ಸಮಯ ನೋಡಿಕೊಂಡು ರಾಜ್ಯ ಸರ್ಕಾರ ಮಹತ್ವದ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ಹೀಗೆ ಹಲವಾರು ಪ್ರಮುಖ ಕಾಯ್ದೆಗಳನ್ನು ತಿದ್ದುಪಡಿ ಮಾಡುತ್ತಿರುವುದು ಖಂಡನೀಯ. ಕಳೆದ ವರ್ಷ ಕೃಷ್ಣಾ ನದಿ ಪ್ರವಾಹದ ನೆರೆ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ಸಿಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಕೊರೊನಾ ನೆಪ ಹೇಳಿ ಸರ್ಕಾರ ಮತ್ತು ಅಧಿಕಾರಿಗಳು ಜನರನ್ನು ಅರ್ಧ ಹಾದಿಯಲ್ಲಿ ಕೈಬಿಟ್ಟಿದ್ದಾರೆ. ವಿದ್ಯುತ್ ಖಾಸಗೀಕರಣ, ಭೂಸುಧಾರಣಾ ಕಾಯ್ದೆ ತಿದ್ದುಪಡಿ ರೈತರಿಗೆ ಮರಣ ಶಾಸನ ಬರೆದಂತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.