ಬೆಳಗಾವಿ:ಭೂಸುಧಾರಣಾ ಕಾಯ್ದೆ ತಿದ್ದುಪಡಿ ಮಸೂದೆ ರದ್ದು ಸೇರಿದಂತೆ ಇತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಭಾರತೀಯ ಕೃಷಿಕ ಸಮಾಜದ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಬೆಳಗಾವಿ: ಭೂಸುಧಾರಣಾ ಕಾಯ್ದೆ ತಿದ್ದುಪಡಿ ಮಸೂದೆ ವಿರೋಧಿಸಿ ಪ್ರತಿಭಟನೆ ಈ ವೇಳೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡ ಸಿದ್ದಗೌಡ ಮೋದಗಿ, ಕೊರೊನಾ ಮಹಾಮಾರಿ ವೈರಸ್ನಿಂದಾಗಿ ರೈತರು, ನೆರೆ ಸಂತ್ರಸ್ತರು ಹಾಗೂ ಕೂಲಿ ಕಾರ್ಮಿಕರು ಸಮಸ್ಯೆಗೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಭೂಸುಧಾರಣಾ ಕಾಯ್ದೆಗೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿರುವುದು ರೈತರನ್ನು ಇನ್ನಷ್ಟು ಪಾತಾಳಕ್ಕೆ ತಳ್ಳಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಕಾಯ್ದೆಯಿಂದ ರೈತರ ಕೃಷಿ ಜಮೀನುಗಳನ್ನು ಯಾರು ಬೇಕಾದರೂ ತೆಗೆದುಕೊಳ್ಳಬಹುದಾಗಿದೆ. ಇದರಿಂದ ರೈತರ ಕೃಷಿ ಭೂಮಿಗಳು ಉಳ್ಳವರ ಪಾಲಾಗಲಿದೆ. ಹೀಗಾಗಿ ಭೂ ಸುಧಾರಣಾ ಕಾಯ್ದೆಯನ್ನು ರದ್ದುಪಡಿಸಿಬೇಕು. ಸರ್ಕಾರದಿಂದ ವಿತರಿಸಿದ ಕಳಪೆ ಬೀಜಕ್ಕೆ ರೈತರಿಗೆ ಪರಿಹಾರ ನೀಡಬೇಕು. ಕಳಪೆ ಬೀಜ ವಿತರಣೆ ಮಾಡಿದ ಕಂಪನಿ ಹಾಗೂ ಕೃಷಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನೆರೆ ಪ್ರವಾಹಕ್ಕೆ ತುತ್ತಾದ ಸಂತ್ರಸ್ತರಿಗೆ ಈವರೆಗೂ ಪರಿಹಾರ ಸಿಗದೇ ತಾತ್ಕಾಲಿಕ ಶೆಡ್ ಗಳಲ್ಲಿ ವಾಸಿಸುತ್ತಿದ್ದಾರೆ. ಹೀಗಾಗಿ ನೆರೆ ಸಂತ್ರಸ್ತರಿಗೆ ಸರ್ಕಾರ ತಕ್ಷಣ ಪರಿಹಾರ ದೊರಕಿಸಿಕೊಡಬೇಕು. ಗೋವಿನ ಜೋಳಕ್ಕೆ 1760 ರೂಪಾಯಿಗಳ ನಿರ್ದಿಷ್ಟ ಬೆಲೆ ನಿಗದಿ ಮಾಡಬೇಕು. ಇದಲ್ಲದೇ ರೈತರ ಹಲವು ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.