ಬೆಳಗಾವಿ: ಕಿತ್ತೂರು ಚೆನ್ನಮ್ಮ 1824ರಲ್ಲೇ ಬ್ರಿಟಿಷರ ವಿರುದ್ಧ ಹೋರಾಡಿದ್ದರು. ಆದರೆ, ಇತಿಹಾಸದ ಪಾಠಗಳಲ್ಲಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರು ಬ್ರಿಟಿಷರ ವಿರುದ್ಧ ಹೋರಾಡಿದ ಮೊದಲ ಮಹಿಳೆ ಎಂಬ ತಪ್ಪು ಮಾಹಿತಿ ಇದೆ. ಇದನ್ನು ಸರಿಪಡಿಸುವ ಅಗತ್ಯವಿದೆ ಎಂದು ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ ರಾಮಚಂದ್ರಗೌಡ ಅವರು ಒತ್ತಾಯಿಸಿದ್ದಾರೆ.
ಜಿಲ್ಲಾಡಳಿತ, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಚನ್ನಮ್ಮನ ಕಿತ್ತೂರಿನ ಕೋಟೆ ಆವರಣದಲ್ಲಿ ಎರಡು ದಿನಗಳ ಕಿತ್ತೂರು ಉತ್ಸವ-2021 ಸಮಾರೋಪ ಸಮಾರಂಭ ಏರ್ಪಡಿಸಲಾಗಿತ್ತು. ಈ ವೇಳೆ ಅವರು ಮಾತನಾಡಿ, ಕಿತ್ತೂರು ನಾಡಿನ ಜನರು ಸ್ವಾಭಿಮಾನಿಗಳು ಹಾಗೂ ದೇಶಪ್ರೇಮಿಗಳಾಗಿದ್ದಾರೆ. ಕಿತ್ತೂರು ಹಾಗೂ ಹಿರೇಬಾಗೇವಾಡಿ ಮಧ್ಯೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯವನ್ನು ಎಲ್ಲರು ಗಮನಸೆಳೆಯುವ ಹಾಗೆ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.
ಕಿತ್ತೂರಿನಲ್ಲಿ ಚೆನ್ನಮ್ಮ ಅಧ್ಯಯನ ಪೀಠ
ಕಿತ್ತೂರಿನಲ್ಲಿ ಜಮೀನು ಹಾಗೂ ಅನುದಾನ ಒದಗಿಸಿದರೆ ಚೆನ್ನಮ್ಮ ಅಧ್ಯಯನ ಪೀಠ ಸೇರಿದಂತೆ ವಿವಿಧ ವಿಭಾಗಗಳನ್ನು ವಿಶ್ವವಿದ್ಯಾಲಯ ವತಿಯಿಂದ ಆರಂಭಿಸಲಾಗುವುದು. ಕಿತ್ತೂರು ರಕ್ಷಣೆಗಾಗಿ ಪ್ರಾಣವನ್ನು ಪಣಕ್ಕಿಟ್ಟಿರುವ ಇತರರ ಬಗ್ಗೆ ಜನರಿಗೆ ತಿಳಿಸಿಕೊಡುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
ವಿಧಾನಪರಿಷತ್ ಸದಸ್ಯ ಹಣಮಂತ ನಿರಾಣಿ ಅವರು ಮಾತನಾಡಿ, ಬ್ರಿಟಿಪ್ ಅಧಿಕಾರಿ ಥ್ಯಾಕರೆಯ ವಿರುದ್ಧ ಹೋರಾಡುವ ಮೂಲಕ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದ ಚನ್ನಮ್ಮ ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪ್ರಥಮ ಮಹಿಳೆ ಕಿತ್ತೂರು ಚೆನ್ನಮ್ಮ. ಬ್ರಿಟಿಷರ ವಿರುದ್ಧ ಮೊಟ್ಟಮೊದಲ ಹೋರಾಟ ನಡೆಸಿದ ಮಹಿಳೆ ಚೆನ್ನಮ್ಮ ಎಂಬುದನ್ನು ಇಡೀ ಜಗತ್ತಿಗೆ ತೋರಿಸಿಕೊಡುವ ಅಗತ್ಯವಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಕಿತ್ತೂರು ಉತ್ಸವ ಸರ್ಕಾರದ ಉತ್ಸವ ಅಲ್ಲ; ಜನರ ಉತ್ಸವ ಆಗಿದೆ. ಚನ್ನಮ್ಮನ ಕೋಟೆಯ ಪ್ರತಿರೂಪವನ್ನು ನಿರ್ಮಿಸಲು ಸರ್ಕಾರ ಮುಂದಾಗಿದೆ. ಆದರೆ, ನಾಡಿನ ಜನರಿಂದ ದೇಣಿಗೆ ಸಂಗ್ರಹಿಸಿ ಕೋಟೆ ನಿರ್ಮಿಸಬೇಕು. ಇದರಿಂದಾಗಿ ಇದು ನಮ್ಮ ಕೋಟೆ ಎಂಬ ಭಾವನೆ ಜನರಲ್ಲಿ ಬರಲಿದೆ. ಕಿತ್ತೂರು ಇತಿಹಾಸ, ಚೆನ್ನಮ್ಮನ ಹೋರಾಟದ ಬದುಕಿನ ಮೇಲೆ ಬೆಳಕುಚೆಲ್ಲುವ ಪುಸ್ತಕಗಳನ್ನು ಯುವ ಸಮಯದಾಯ ಓದಬೇಕು ಎಂದು ಈರಣ್ಣ ಕಡಾಡಿ ಸಲಹೆ ನೀಡಿದರು.