ಬೆಳಗಾವಿ:ಶಿವಸೇನೆ, ಎಂಇಎಸ್ ನಿಷೇಧಕ್ಕೆ ಆಗ್ರಹಿಸಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕರ್ನಾಟಕ-ಮಹಾರಾಷ್ಟ್ರ ಗಡಿಯೊಳಗೆ ನುಗ್ಗಲು ಯತ್ನಿಸಿದ ಕನ್ನಡ ಸಂಘಟನೆಗಳ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಮೊದಲು ನಗರದ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ವಾಟಾಳ್ ನಾಗರಾಜ್ ನೇತೃತ್ವದ ತಂಡ, ಗಡಿಯೊಳಗೆ ನುಗ್ಗಲು ಯತ್ನಿಸಿದಾಗ ಪೊಲೀಸರು ಅವಕಾಶ ನಿರಾಕರಿಸಿದರು. ಈ ವೇಳೆ ಪೊಲೀಸರೊಂದಿಗೆ ವಾಗ್ವಾದ ನಡೆಸಿದ ವಾಟಾಳ್ ನಾಗರಾಜ್, ರಸ್ತೆ ಮೇಲೆ ಕುಳಿತು ಧರಣಿಗೆ ಮುಂದಾದರು. ಈ ವೇಳೆ ಪೊಲೀಸರು ವಶಕ್ಕೆ ಪಡೆದರು.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್, ಬೆಳಗಾವಿಯನ್ನು ಕರ್ನಾಟಕ ಸರ್ಕಾರ, ಸಿಎಂ ಗಂಭೀರವಾಗಿ ಪರಿಗಣಿಸಿಲ್ಲ. ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, ಅವರಪ್ಪ ಬಾಳ ಠಾಕ್ರೆ ತಮ್ಮ ಜೀವನವನ್ನೇ ಗಡಿ ಭಾಗಕ್ಕೆ ಮುಡಿಪಾಗಿಟ್ಟಿದ್ದಾರೆ. ಕರ್ನಾಟಕದ ಸಿಎಂ ಏನು ದನ ಕಾಯುತ್ತಿದ್ದಾರಾ? ಗಡಿನಾಡು ಸಮಿತಿ ಮಾಡಿದ್ದಾರೆ. ಅದು ಏನಾಗಿದೆ ಎಂಬುವುದು ಯಾರಿಗೂ ಗೊತ್ತಿಲ್ಲ. ಸುಪ್ರೀಂ ಕೋರ್ಟ್ನಲ್ಲಿ ಬೆಳಗಾವಿ ಬಗ್ಗೆ ಮಹಾರಾಷ್ಟ್ರ ಸರ್ಕಾರ ಹೋರಾಟ ಮಾಡಲು ಮುಂದಾಗಿದೆ. ಇಲ್ಲಿ ಸುವರ್ಣಸೌಧ ಯಾವುದಕ್ಕಾಗಿ ಕಟ್ಟಿದ್ರು, ಇದರ ಉಪಯೋಗ ಏನು?. ಕನಿಷ್ಠ ವರ್ಷಕ್ಕೆ ಒಂದು ಸಾರಿಯಾದರೂ ಪರಿಣಾಮಕಾರಿ ಚರ್ಚೆ ಆಗುತ್ತಿಲ್ಲ. ಸುವರ್ಣಸೌಧ ಒಂದು ರೀತಿ ದೆವ್ವದ ಮನೆಯಾಗಿದೆ. ಒಬ್ಬ ರಾಜಕಾರಣಿ, ಮಂತ್ರಿಯೂ ಅಲ್ಲಿಗೆ ಹೋಗಲ್ಲ, ಸರಿಯಾದ ಕಾರ್ಯಾಲಯ ಇಲ್ಲ. ಇದು ಕನ್ನಡಿಗರಿಗೆ ಮಾಡಿದ ದ್ರೋಹವಾಗಿದೆ. ಎಂಇಎಸ್‌ಗೆ ಬೆಳಗಾವಿ ಜಿಲ್ಲಾಡಳಿತ ಮಣೆ ಹಾಕಿ ಗೌರವ ಕೊಡ್ತಿದೆ. ಯಡಿಯೂರಪ್ಪಗೆ ಕರ್ನಾಟಕದ ಗಡಿ ಸಮಸ್ಯೆ, ಗಡಿನಾಡಿನ ಪರಿಸ್ಥಿತಿ ಬೇಕಾಗಿಲ್ಲ. ಯಡಿಯೂರಪ್ಪ ಅತ್ಯಂತ ಕೆಳಮಟ್ಟದ ಸಿಎಂ. ಕರ್ನಾಟಕದ ಇತಿಹಾಸದಲ್ಲಿ ಇಂತಹ ಸಿಎಂ ನೋಡಿಲ್ಲ ಎಂದು ವಾಗ್ದಾಳಿ ನಡೆಸಿದರು.