ಬೆಳಗಾವಿ: ಇಂದು ಪ್ರಕಟವಾಗಿರುವ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಬೆಳಗಾವಿಯ ಕೆಎಲ್ಇ ಸಂಸ್ಥೆಯ ಲಿಂಗರಾಜ ಕಾಲೇಜಿನ ವಿದ್ಯಾರ್ಥಿನಿ ಪ್ರಿಯಾಂಕಾ ಕುಲಕರ್ಣಿ ಶೇ.98.6 ರಷ್ಟು ಅಂಕ ಗಳಿಸುವ ಮೂಲಕ ಇಡೀ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.
ಪ್ರಿಯಾಂಕಾ ಕುಲಕರ್ಣಿ 592 ಅಂಕ ಗಳಿಸಿದ್ದು, ಭೂಗರ್ಭ ಶಾಸ್ತ್ರದಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ್ದಾರೆ. ಅರ್ಥಶಾಸ್ತ್ರ 98, ಇತಿಹಾಸ 98, ರಾಜಕೀಯ ಶಾಸ್ತ್ರ 99, ಇಂಗ್ಲೀಷ್ 99, ಹಿಂದಿ 98 ಅಂಕಗಳನ್ನು ಪಡೆದಿದ್ದಾರೆ. ರಾಜ್ಯಕ್ಕೆ ದ್ವಿತೀಯ ಸ್ಥಾನ ಬಂದಿರುವ ಹಿನ್ನೆಲೆಯಲ್ಲಿ ಪ್ರಿಯಾಂಕಾ ಮನೆಯಲ್ಲಿ ಸಂಭ್ರಮ ಸಡಗರ ಮನೆ ಮಾಡಿತ್ತು. ಈ ವೇಳೆ ತಂದೆ - ತಾಯಿ, ಅಜ್ಜಿ ಸಿಹಿ ತಿನಿಸಿ ಖುಷಿ ಪಟ್ಟರು.
ಬಳಿಕ ನಮ್ಮ ಈಟಿವಿ ಭಾರತ ಜೊತೆಗೆ ಮಾತನಾಡಿದ ಪ್ರಿಯಾಂಕಾ, "ಓದುವುದನ್ನೇ ಅಭ್ಯಾಸವಾಗಿ ಮಾಡಿಕೊಂಡಿದ್ದರಿಂದ ನನಗೆ ಯಾವುದೇ ರೀತಿ ಒತ್ತಡ ಆಗಲಿಲ್ಲ. ಪರ್ಸೆಂಟೇಜ್ ನಿರೀಕ್ಷೆ ಇತ್ತು. ಆದರೆ, ಇಡೀ ರಾಜ್ಯಕ್ಕೆ ನಾನು ಎರಡನೇ ಸ್ಥಾನ ಬರುತ್ತೇನೆ ಎಂದುಕೊಂಡಿರಲಿಲ್ಲ. ತುಂಬಾ ಖುಷಿಯಾಗಿದೆ. ಯುಪಿಎಸ್ಸಿ ಪರೀಕ್ಷೆ ಎದುರಿಸಬೇಕು ಎಂಬ ಗುರಿಯಿದೆ. ನಮ್ಮ ತಂದೆ ತಾಯಿ ನನಗೆ ಎಲ್ಲ ರೀತಿಯ ಪ್ರೋತ್ಸಾಹ ನೀಡಿದ್ದರು. ನಾನು ಚಿಕ್ಕವಳಿದ್ದಾಗ ಒಂದು ಬಾರಿ ಡಿಸಿಯವರ ಮನೆ ನೋಡಿ ಯುಪಿಎಸ್ಸಿ ಆಸೆ ನನಗೆ ಚಿಗುರೊಡೆಯಿತು ಎಂದರು.
ಬಳಿಕ ಮಾತನಾಡಿದ ವಿದ್ಯಾರ್ಥಿನಿ ತಾಯಿ ದೀಪಾಲಿ, ನಮ್ಮ ಮಗಳು ತುಂಬಾ ಹಾರ್ಡ್ ವರ್ಕ್ ಮಾಡುತ್ತಿದ್ದರು. ಆಕೆಯ ಇಂದಿನ ಸಾಧನೆ ನೋಡಿ ತುಂಬಾ ಹೆಮ್ಮೆ ಎನಿಸುತ್ತಿದೆ. ಜಿಲ್ಲಾಧಿಕಾರಿ ಆಗಬೇಕು ಎಂಬುದು ನಮ್ಮ ಮಹದಾಸೆ ಎಂದರು.