ಬೆಂಗಳೂರು:ಶಾಸಕರ ಹಕ್ಕುಚ್ಯುತಿ ಉಲ್ಲಂಘನೆಯಾಗಿರುವ ವಿಚಾರಕ್ಕೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಇಂದು ವಿಧಾನಸಭೆಯಲ್ಲಿ ಬಿಸಿ ಬಿಸಿ ಚರ್ಚೆ ನಡೆಯಿತು. ಶೂನ್ಯ ವೇಳೆಯಲ್ಲಿ ಶೃಂಗೇರಿ ಕ್ಷೇತ್ರದ ಶಾಸಕ ರಾಜೇಗೌಡ ಅವರು ವಿಷಯ ಪ್ರಸ್ತಾಪಿಸಿ, ನನ್ನ ಕ್ಷೇತ್ರದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಶಾಸಕನಾಗಿರುವ ನನ್ನನ್ನು ಕಡೆಗಣಿಸಲಾಗಿದೆ. ನನ್ನ ವಿರುದ್ಧ ಪರಾಭವಗೊಂಡಿದ್ದ ಅಭ್ಯರ್ಥಿಯ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಿ ಅವರಿಂದಲೇ ಉದ್ಘಾಟಿಸಿದ್ದಾರೆ. ಇದು ಶಿಷ್ಟಾಚಾರದ ಉಲ್ಲಂಘನೆ ಎಂದರು.
ಅಮರಣಾಂತ ಉಪವಾಸದ ಎಚ್ಚರಿಕೆ: ಮುಂದುವರೆದು ಮಾತನಾಡಿ, ನನಗೆ ಆಗಿರುವ ಅನ್ಯಾಯವನ್ನು ಸರಿಪಡಿಸದಿದ್ದರೆ ಅಮರಣಾಂತರ ಉಪವಾಸ ಕೂರುತ್ತೇನೆ ಎಂದು ಅವರು ಬೆದರಿಕೆ ಹಾಕಿದ ಪ್ರಸಂಗವೂ ನಡೆಯಿತು. ತಕ್ಷಣವೇ ಸಭಾಧ್ಯಕ್ಷರು ಇದನ್ನು ಹಕ್ಕುಚ್ಯುತಿಗೆ ಶಿಫಾರಸು ಮಾಡಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ರಾಜೇಗೌಡ ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಶಾಸಕರನ್ನು ಕಡೆಗಣಿಸಿ ಅವರ ವಿರುದ್ಧ ಪರಾಭವಗೊಂಡಿದ್ದ ಅಭ್ಯರ್ಥಿಗೆ ಅನುದಾನ ಬಿಡುಗಡೆ ಮಾಡಿ ಅವರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಉದ್ಘಾಟಿಸುವುದು ಪ್ರಜಾಪ್ರಭುತ್ವ ವಿರೋಧಿ ನಡೆ ಎಂದರು.
ಕಾಂಗ್ರೆಸ್ ಇರಲಿ, ಬಿಜೆಪಿ ಇರಲಿ ಅಥವಾ ಜೆಡಿಎಸ್ ಇರಲಿ. ಈ ರೀತಿ ಹಾಲಿ ಶಾಸಕರನ್ನು ಕಡೆಗಣಿಸಿ ಅವರ ವಿರುದ್ಧ ಸೋತಿದ್ದ ಅಭ್ಯರ್ಥಿಗೆ ಅನುದಾನ ಬಿಡುಗಡೆ ಮಾಡುವುದು ಶಾಸಕರ ಹಕ್ಕನ್ನು ಮೊಟಕುಗೊಳಿಸುತ್ತದೆ. ಹಿಂದೆ ಈ ರೀತಿ ಯಾರೇ ಮಾಡಿದ್ದರೂ ತಪ್ಪು. ಹಾಗೆಂದು ನೀವು ಕೂಡ ಮುಂದುವರೆಸುವುದು ತಪ್ಪು ಎಂದು ಟೀಕಿಸಿದರು. ಸದಸ್ಯರ ಹಕ್ಕುಗಳನ್ನು ಕಾಪಾಡುವುದು ಸಭಾಧ್ಯಕ್ಷರ ಜವಾಬ್ದಾರಿ ಎಂದರು. ಇದಕ್ಕೆ ಸದನದ ಉಪ ನಾಯಕ ಯು.ಟಿ.ಖಾದರ್, ಹಿರಿಯ ಸದಸ್ಯ ಆರ್.ವಿ. ದೇಶಪಾಂಡೆ ಲಿಂಗೇಶ್, ನಂಜೇಗೌಡ, ಸಾ.ರಾ.ಮಹೇಶ್, ಶಿವಲಿಂಗೇಗೌಡ ಸೇರಿದಂತೆ ಇತರ ಶಾಸಕರು ದನಿಗೂಡಿಸಿದರು.
ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಮಾತನಾಡಿ, ಒಂದು ನಿಲುವಳಿ ಸೂಚನೆ ಮೇಲೆ ಇದೇ ಸದನದಲ್ಲಿ ಒಂದು ವಾರ ಚರ್ಚೆ ನಡೆದ ನಿದರ್ಶನವಿದೆ. ಸರ್ಕಾರ ಬರುತ್ತದೆ, ಹೋಗುತ್ತದೆ. ಯಾವ ಪಕ್ಷ ಎಂಬುದು ಮುಖ್ಯವಾಗಬಾರದು. ಶಾಸಕರ ಹಕ್ಕುಗಳನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ಅವರಿಗೆ ನಿರ್ಬಂಧ ಹಾಕಿ ಪರಾಜಿತ ಅಭ್ಯರ್ಥಿಯಿಂದ ಉದ್ಘಾಟನೆ ಮಾಡಿಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.