ಕರ್ನಾಟಕ

karnataka

ETV Bharat / state

ಮುಂದಿನ ಅಧಿವೇಶನದಲ್ಲಿ ರಾಜ್ಯ ಹಣಕಾಸು ಪರಿಸ್ಥಿತಿ ಕುರಿತ ಶ್ವೇತಪತ್ರ ಮಂಡನೆ: ಸಿಎಂ

ಮುಂಬರುವ ಅಧಿವೇಶನದಲ್ಲಿ ಹಣಕಾಸು ಪರಿಸ್ಥಿತಿಗೆ ಸಂಬಂಧಿಸಿದ ಶ್ವೇತಪತ್ರ ಹೊರಡಿಸಲಾಗುವುದು. ಇದರಲ್ಲಿ ಹಿಂದಿನ ಸರ್ಕಾರ ಮತ್ತು ಈಗಿನ ಸರ್ಕಾರ ಎಷ್ಟು ಹಣ ಒದಗಿಸಿದೆ ಎಂಬುದು ಇರಲಿದೆ.

Presentation of white paper on financial situation
ಸಿಎಂ

By

Published : Dec 29, 2022, 5:24 PM IST

ಬೆಳಗಾವಿ: ಮುಂದಿನ ಅಧಿವೇಶನದಲ್ಲಿ ರಾಜ್ಯ ಹಣಕಾಸು ಪರಿಸ್ಥಿತಿ ಕುರಿತ ಶ್ವೇತಪತ್ರ ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ಪೂರಕ ಅಂದಾಜುಗಳ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜನಪರ ಹಾಗೂ ಅಭಿವೃದ್ಧಿ ಯೋಜನೆಗಳಿಗೆ ಹಿಂದಿನ ಸರ್ಕಾರದಲ್ಲಿ ಎಷ್ಟು ಹಣ ಒದಗಿಸಲಾಗಿತ್ತು. ನಮ್ಮ ಸರ್ಕಾರ ಒದಗಿಸಿರುವ ಹಣ ಮತ್ತು ತೆರಿಗೆ ಸಂಗ್ರಹ ಕುರಿತ ಅಂಶಗಳನ್ನು ಒಳಗೊಂಡ ಸಮಗ್ರ ಶ್ವೇತಪತ್ರ ಹೊರಡಿಸುವುದಾಗಿ ಸದನದಲ್ಲಿ ಹೇಳಿದರು.

ಅಭಿವೃದ್ಧಿ ಯೋಜನೆಗಳಿಗೆ ಹಣಕಾಸಿನ ಕೊರತೆ:ಕಾಂಗ್ರೆಸ್ ಶಾಸಕ ಕೃಷ್ಣ ಬೈರೇಗೌಡ ಮಾತನಾಡಿ, ಪೂರಕ ಅಂದಾಜುಗಳ ಚರ್ಚೆ ಸಂದರ್ಭದಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಪಾಲು ಪಡೆಯುವಲ್ಲಿ ಸರ್ಕಾರ ಎಡವಿದೆ. ಇದರಿಂದಾಗಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಹಣಕಾಸಿನ ಕೊರತೆ ಎದುರಾಗಿದೆ ಎಂದು ಆರೋಪಿಸಿದರು. ಈ ವೇಳೆ, ಇದಕ್ಕೆ ಮುಖ್ಯಮಂತ್ರಿಗಳು ಪ್ರತಿಕ್ರಿಯಿಸಿದರು.

ಮುಂದಿನ ವಿಧಾನಸಭೆ ಚುನಾವಣಾ ವೆಚ್ಚ 300 ಕೋಟಿ ರೂಪಾಯಿ ಸೇರಿದಂತೆ 2022-23ನೇ ಸಾಲಿಗೆ 8001.13 ಕೋಟಿ ರೂ. ಮೊತ್ತದ ಪೂರಕ ಅಂದಾಜುಗಳ ಎರಡನೇ ಕಂತನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ವಿಧಾನಸಭೆಯಲ್ಲಿ ಮಂಡಿಸಿದ್ದಾರೆ.

ಮನವಿ ಮಾಡಿದ ಸಿಎಂ: ಪೂರಕ ಅಂದಾಜುಗಳ ಎರಡನೇ ಕಂತಿನ ಬೇಡಿಕೆಗಳನ್ನು ಮಂಡಿಸಿದ ಮುಖ್ಯಮಂತ್ರಿಗಳು ಈ ಮೊತ್ತವನ್ನು ವಿವಿಧ ಬಾಬ್ತುಗಳಿಗೆ ಒದಗಿಸುವ ಅನಿವಾರ್ಯತೆ ಹಿನ್ನೆಲೆ ಸದನ ಒಪ್ಪಿಗೆ ನೀಡಬೇಕೆಂದು ಮನವಿ ಮಾಡಿದರು. ಅಲ್ಲದೇ, ಜಿಎಸ್‍ಟಿ ಪರಿಹಾರದ ವಿಚಾರದಲ್ಲಿ ಕೇಂದ್ರ ಸರ್ಕಾರದಿಂದ 10 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಪರಿಹಾರ ದೊರೆತಿರುವುದರಿಂದ ರಾಜ್ಯಕ್ಕೆ ಹೆಚ್ಚು ಅನುಕೂಲವಾಗಿದೆ. ನಾವು ಸುಮಾರು 5 ಸಾವಿರ ಕೋಟಿ ರೂಪಾಯಿನಷ್ಟು ಜಿಎಸ್‍ಟಿ ಪರಿಹಾರ ದೊರೆಯಬಹುದು ಎಂದು ನಿರೀಕ್ಷೆ ಮಾಡಿದ್ದೆವು ಎಂದು ಸದನಕ್ಕೆ ತಿಳಿಸಿದರು.

ಇದನ್ನೂ ಓದಿ:ಮತದಾರರ ಮಾಹಿತಿ ಕಳ್ಳತನಕ್ಕೂ, ಕುಕ್ಕರ್ ಬ್ಲಾಸ್ಟ್‌ಗೂ ಲಿಂಕ್ ಮಾಡಬೇಡಿ: ಸಿಎಂ

ಪ್ರಕೃತಿ ವಿಕೋಪ ಪರಿಹಾರ ನಿಧಿಗೆ 1,396 ಕೋಟಿ ರೂಪಾಯಿ, ನರೇಗಾ ಯೋಜನೆಗೆ 750 ಕೋಟಿ ರೂ. ಇಂಧನ ಕ್ಷೇತ್ರಕ್ಕೆ 500 ಕೋಟಿ ರೂ. ಮುಂಬರುವ ಚುನಾವಣಾ ವೆಚ್ಚಕ್ಕಾಗಿ 300 ಕೋಟಿ ರೂಪಾಯಿ ಒಂದು ಸಾವಿರ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಕಲ್ಪಿಸುವ ನಾಲ್ಕು ಮೆಗಾ ಹಾಸ್ಟೆಲ್‍ಗಳ ನಿರ್ಮಾಣ, ಸೇರಿದಂತೆ ರೈಲ್ವೆ, ವಸತಿ, ಜಲಧಾರೆ ಮತ್ತಿತರ ಯೋಜನೆಗಳಿಗೆ ಪೂರಕ ಅಂದಾಜಿನಲ್ಲಿ ಒದಗಿಸಿರುವ ಮೊತ್ತವನ್ನು ವೆಚ್ಚ ಮಾಡಲಾಗುವುದು. ಬಿಬಿಎಂಪಿ ಅಭಿವೃದ್ಧಿ ಕೆಲಸಗಳಿಗೆ 200 ಕೋಟಿ ರೂ. ಒದಗಿಸಲಾಗುವುದು ಎಂದು ಹೇಳಿದರು.

ರಾಜ್ಯದ ಆರ್ಥಿಕತೆ ಪೂರಕವಾಗಿಲ್ಲ: ಪೂರಕ ಅಂದಾಜುಗಳ ಮೇಲೆ ಮಾತನಾಡಿದ ಕಾಂಗ್ರೆಸ್ ಶಾಸಕ ಕೃಷ್ಣಬೈರೇಗೌಡ ಅವರು, ರಾಜ್ಯದ ಸಾಲ ಸ್ಥಿತಿ ತೃಪ್ತಿಕರವಾಗಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು. ಸರ್ಕಾರ ನಿಗದಿಗಿಂತ ಕಡಿಮೆ ಸಾಲ ಮಾಡಿರುವುದಾಗಿ ಹೇಳಿದ್ದರೂ ಕೂಡ ಇದುವರೆಗಿನ ಸಾಲ ತೆಗೆದುಕೊಂಡ ಪ್ರಮಾಣ ಒಟ್ಟಾರೆ ರಾಜ್ಯದ ಆರ್ಥಿಕತೆಗೆ ಪೂರಕವಾಗಿಲ್ಲ ಎಂದು ಹೇಳಿದರು.

ಇದಕ್ಕೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ದನಿಗೂಡಿಸಿ, ಸಾಲ ಮಾಡಿರುವ ಪ್ರಮಾಣವು ಆರ್ಥಿಕ ಆರೋಗ್ಯ ಸರಿಯಾಗಿಲ್ಲ ಎಂಬುದನ್ನು ತೋರಿಸುತ್ತದೆ. ಈ ವೇಳೆ, ಮಧ್ಯಪ್ರವೇಶಿಸಿ ಮುಖ್ಯಮಂತ್ರಿಗಳು 63 ಸಾವಿರ ಕೋಟಿ ರೂ. ನಷ್ಟು ಮಾತ್ರ ಸಾಲ ಮಾಡಲಾಗಿದೆ. ಆದರೆ 75 ಸಾವಿರ ಕೋಟಿ ರೂಪಾಯಿವರೆಗೆ ಸಾಲ ಮಾಡಲು ಸದನದ ಮೂಲಕ ಬಜೆಟ್ ಮಂಡಿಸುವಾಗ ಅನುಮತಿ ನೀಡಿತ್ತು ಎಂದು ಸಮರ್ಥನೆ ಮಾಡಿಕೊಂಡರು.

ಸಾಲದ ಸುಳಿಗೆ ಸಿಲುಕುತ್ತಿರುವ ರಾಜ್ಯ: ನಂತರ ಕೃಷ್ಣಬೈರೇಗೌಡರು ತಮ್ಮ ಮಾತು ಮುಂದುವರೆಸಿದರು. 15ನೇ ಕೇಂದ್ರ ಹಣಕಾಸು ಆಯೋಗ ಶಿಫಾರಸಿನ ಪ್ರಕಾರ, ಕೇಂದ್ರಕ್ಕೆ ಒಟ್ಟಾರೆ ಸಂಗ್ರಹವಾಗುವ ತೆರಿಗೆ ಪೈಕಿ ಶೇ.1ರಷ್ಟು ಮೊತ್ತವನ್ನು ರಾಜ್ಯಗಳಿಗೆ ಹಂಚಿಕೆ ಮಾಡಬೇಕಾಗಿದೆ. ಆದರೆ, ಈ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ಇದರಿಂದಾಗಿ ರಾಜ್ಯ ಸರ್ಕಾರ ಅಧಿಕ ಪ್ರಮಾಣದ ಸಾಲದ ಸುಳಿಗೆ ಸಿಲುಕುತ್ತಿದೆ ಎಂದು ಹೇಳಿದರು.

ಮಧ್ಯೆ ಪ್ರವೇಶಿಸಿದ ಮುಖ್ಯಮಂತ್ರಿ ಬೊಮ್ಮಾಯಿ ಅವರು, ಆಯೋಗಕ್ಕೂ ಕೇಂದ್ರ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಆಯೋಗ ಶಿಫಾರಸು ಮಾಡಿದಂತೆ ನಮಗೆ ತೆರಿಗೆ ಪಾಲು ದೊರೆಯುತ್ತಿಲ್ಲ. ಸೆಸ್​​ ಮತ್ತು ಸರ್ಚಾಜ್‍ನಿಂದ ಬರುವ ಆದಾಯವನ್ನು ಕೇಂದ್ರ ಸರ್ಕಾರವೇ ಇಟ್ಟುಕೊಳ್ಳುವುದು ಮೊದಲಿನಿಂದಲೂ ನಡೆದುಬಂದಿದೆ. ನಂತರ ಪೂರಕ ಅಂದಾಜುಗಳ ವಿಧೇಯಕವನ್ನು ಸದನ ಸರ್ವಾನುಮತದಿಂದ ಅಂಗೀಕರಿಸಿತು.

ABOUT THE AUTHOR

...view details