ಕರ್ನಾಟಕ

karnataka

ETV Bharat / state

ಕೋವಿಡ್‌ ನಂತರ ಜಿಎಸ್‌ಟಿ ಸಂಗ್ರಹ ಶೇ 30ರಷ್ಟು ಹೆಚ್ಚಳ: ಮಧ್ಯವಾರ್ಷಿಕ ಪರಿಶೀಲನಾ ವರದಿ - kannada top news

ರಾಜ್ಯದ ಆರ್ಥಿಕತೆಯ ಆರೋಗ್ಯ ಹೇಗಿದೆ? ಕೋವಿಡ್‌ ನಂತರ ಜಿಎಸ್‌ಟಿ ಸಂಗ್ರಹ ಎಷ್ಟು ಚೇತರಿಕೆ ಕಂಡಿತು. ಅಷ್ಟೇ ಅಲ್ಲ, ಸಾಲದ ಹೊರೆಯೇನು? ಎಂಬುದನ್ನೆಲ್ಲ ತಿಳಿಸುವ ಸರ್ಕಾರದ ಹಣಕಾಸಿನ ಮಧ್ಯವಾರ್ಷಿಕ ಪರಿಶೀಲನಾ ವರದಿಯನ್ನು ಇಂದು ವಿಧಾನಸಭೆಯಲ್ಲಿ ಮಂಡಿಸಲಾಗಿದೆ.

presentation-of-mid-year-review-report-for-fiscal-2022-23-in-the-assembly
ವಿಧಾನಸಭೆಯಲ್ಲಿ 2022-23ನೇ ಹಣಕಾಸಿನ ಮಧ್ಯವಾರ್ಷಿಕ ಪರಿಶೀಲನಾ ವರದಿ ಮಂಡನೆ

By

Published : Dec 26, 2022, 10:10 PM IST

ಬೆಳಗಾವಿ : 2022-23ನೇ ಹಣಕಾಸಿನ ಮಧ್ಯವಾರ್ಷಿಕ ಪರಿಶೀಲನಾ ವರದಿಯನ್ನು ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ಇಂದು ಮಂಡಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪರವಾಗಿ ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಸದನದಲ್ಲಿ ಪರಿಶೀಲನಾ ವರದಿ ಮಂಡಿಸಿದರು. ಕೋವಿಡ್ ಅವಧಿ ನಂತರ ರಾಜ್ಯದ ಜಿಎಸ್‍ಟಿ ಸಂಗ್ರಹ ಶೇ.30 ರಷ್ಟು ಹೆಚ್ಚಳವಾಗಿದೆ. ಹಣದುಬ್ಬರವೂ ಕಡಿಮೆಯಾಗಿ ರಾಜ್ಯದ ಒಟ್ಟಾರೆ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಕೋವಿಡ್ ಅವಧಿಯಲ್ಲಿ (2021-22) ಕರ್ನಾಟಕ ರಾಜ್ಯದ ಜಿಎಸ್‍ಟಿ ಸಂಗ್ರಹ ಶೇ.10 ರಷ್ಟು ಹೆಚ್ಚಾಗಿತ್ತು. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 2022-23ರ ಪ್ರಥಮ ಅರ್ಧ ವಾರ್ಷಿಕದಲ್ಲಿ ಶೇ.30 ರಷ್ಟು ಜಿಎಸ್‍ಟಿ ಸಂಗ್ರಹ ಏರಿಕೆಯಾಗಿದೆ. ಅಲ್ಲದೇ, 2022-23ರ ಪ್ರಸಕ್ತ ಸಾಲಿನ ಮೊದಲ ತ್ರೈಮಾಸಿಕದಲ್ಲೇ 21,480 ಕೋಟಿ ರೂ. ವಿದೇಶಿ ನೇರ ಬಂಡವಾಳ ಹರಿದುಬಂದಿದೆ. 2022ರ ಏಪ್ರಿಲ್‍ನಲ್ಲಿದ್ದ ಶೇ.6.39 ರಷ್ಟಿದ್ದ ಹಣದುಬ್ಬರ 2022ರ ಸೆಪ್ಟೆಂಬರ್ ವೇಳೆಗೆ 5.81ಕ್ಕೆ ಇಳಿಕೆಯಾಗಿದೆ. ಈ ಅವಧಿಯಲ್ಲಿ ದೇಶದ ಹಣದುಬ್ಬರ 7.4 ರಷ್ಟಿತ್ತು ಎಂಬ ಅಂಶಗಳು ವರದಿಯಲ್ಲಿವೆ.

ಪ್ರಸಕ್ತ ಸಾಲಿನಲ್ಲಿ ರಾಜ್ಯ ಸರ್ಕಾರವು 2.65 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ್ದು, ಬಜೆಟ್‍ನಲ್ಲಿ ಜಿಎಸ್‍ಡಿಪಿಯನ್ನು ಪ್ರಸಕ್ತ ಬೆಲೆಗಳಲ್ಲಿ 18,85,750 ಕೋಟಿ ರೂ. ಎಂದು ಘೋಷಿಸಿತ್ತು. ಆದರೆ, ಕೇಂದ್ರ ಸರ್ಕಾರ 2022-23ರಲ್ಲಿ ರಾಜ್ಯದ ಜಿಎಸ್‍ಡಿಪಿ 21,81,217 ಕೋಟಿ ರೂ. ಎಂದು ಹೇಳಿದೆ. ಅದರಂತೆ ಜಿಎಸ್‍ಡಿಪಿ ಪರಿಷ್ಕರಿಸಿದ್ದು, ಜಿಎಸ್‍ಡಿಪಿಯ ಶೇ.2.82 ರಷ್ಟು ವಿತ್ತೀಯ ಹಾಗೂ ಶೇ.0.67 ರಷ್ಟು ರಾಜಸ್ವ ಕೊರತೆ ಉಂಟಾಗಲಿದೆ.

ಸಾಲದ ಹೊರೆ ಹೆಚ್ಚಳ: 2021-22ನೇ ಆರ್ಥಿಕ ವರ್ಷದಲ್ಲಿ ಒಟ್ಟು ಬಾಕಿ ಇರುವ 4.57 ಲಕ್ಷ ಕೋಟಿ ರೂ. ಸಾಲಕ್ಕೆ ಪ್ರಸಕ್ತ ಸಾಲಿನ 67,911 ಕೋಟಿ ರೂ. ಸಾಲ ಸೇರಿ ರಾಜ್ಯದ ಒಟ್ಟು ಸಾಲದ ಹೊರೆ 5,18,366 ಕೋಟಿ ರೂ.ಗೆ ಹೆಚ್ಚಳವಾಗಿದೆ. ಉಳಿದಂತೆ, 1.31 ಲಕ್ಷ ಕೋಟಿ ರೂ. ಸ್ವಂತ ತೆರಿಗೆ ಮೂಲಗಳಿಂದ ಆದಾಯ ನಿರೀಕ್ಷಿಸಿದ್ದು, ಈ ಪೈಕಿ ವಾಣಿಜ್ಯ ತೆರಿಗೆ 47,568 ಕೋಟಿ ರೂ. (ಶೇ.62ರಷ್ಟು ಸಂಗ್ರಹ), ಅಬಕಾರಿ 14,711 ಕೋಟಿ ರೂ. (ಶೇ.51), ನೋಂದಣಿ ಮತ್ತು ಮುದ್ರಾಂಕ ಶುಲ್ಕ 8,229 (ಶೇ.55), ಮೋಟಾರು ವಾಹನ ತೆರಿಗೆ 8007 ಕೋಟಿ ರೂ. ಪೈಕಿ ಶೇ.56 ರಷ್ಟು ಮೊತ್ತ ಸಂಗ್ರಹವಾಗಿದೆ.

ಈ ವರ್ಷದ ಮಾರ್ಚ್ 2022ರ ಅಂತ್ಯದ ವೇಳೆಗೆ 33,192 ಕೋಟಿ ರೂ. ಗೆ ರಾಜ್ಯ ಸರ್ಕಾರ ಖಾತರಿ ನೀಡಿದೆ. ಹೆಸ್ಕಾಂಗಳ ವಿದ್ಯುತ್ ಖರೀದಿ ಶುಲ್ಕ ಬಾಕಿ ಸೆಪ್ಟೆಂಬರ್​ 30ರ ವೇಳೆಗೆ 17,017 ಕೋಟಿ ರೂ. ಆಗಿದೆ. ಹೆಸ್ಕಾಂಗಳು ಕೆಪಿಸಿಎಲ್, ಆರ್‍ಪಿಸಿಎಲ್, ಕೆಪಿಟಿಸಿಎಲ್‍ಗೆ 13,384 ಕೋಟಿ ರೂ. ನೀಡಬೇಕು. ಈ ಬಿಕ್ಕಟ್ಟು ಬಗೆಹರಿಸಲು 14 ಸಾವಿರ ಕೋಟಿ ರೂ. ಖಾತರಿಯನ್ನು ಸರ್ಕಾರ ನೀಡಿದೆ ಎಂದು ವರದಿಯಲ್ಲಿ ತಿಳಿಸಿದೆ.

ಇದನ್ನೂ ಓದಿ:ರಾಜ್ಯಾದ್ಯಂತ ಇಂದಿನಿಂದ ಮಾಸ್ಕ್ ಕಡ್ಡಾಯ: ರಾಜ್ಯ ಸರ್ಕಾರದಿಂದ ಹೊಸ ಗೈಡ್​ಲೈನ್​ ಬಿಡುಗಡೆ!

ABOUT THE AUTHOR

...view details