ಬೆಳಗಾವಿ: ಕರ್ನಾಟಕ ರಾಜ್ಯೋತ್ಸವಕ್ಕೆ ಕುಂದಾನಗರಿ ಬೆಳಗಾವಿ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ. ಎಲ್ಲೆಲ್ಲೂ ಹಳದಿ, ಕೆಂಪು ಬಣ್ಣದ ಧ್ವಜಗಳೇ ರಾರಾಜಿಸುತ್ತಿದ್ದು, ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಲಕ್ಷಾಂತರ ಕನ್ನಡಿಗರ ಸಮಾಗಮಕ್ಕೆ ರಾಣಿ ಚನ್ನಮ್ಮ ವೃತ್ತ ಸಾಕ್ಷಿಯಾಗಲಿದೆ. ಇಡೀ ರಾಜ್ಯದಲ್ಲೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ವಿಜೃಂಭಣೆಯಿಂದ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗುತ್ತದೆ. ಇಲ್ಲಿನ ಗಲ್ಲಿ ಗಲ್ಲಿಯಲ್ಲಿ ಕನ್ನಡದ ಝೇಂಕಾರ ಮೊಳಗುತ್ತಿದ್ದು, ಕನ್ನಡಮ್ಮನ ಹಬ್ಬಕ್ಕೆ ಕುಂದಾನಗರಿಯಲ್ಲಿ ಸಕಲ ತಯಾರಿ ನಡೆದಿದೆ.
ರಾಣಿ ಚನ್ನಮ್ಮ ವೃತ್ತವಂತೂ ಅಕ್ಷರಶಃ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ. ಚನ್ನಮ್ಮ ಪುತ್ಥಳಿಗೆ ಹೊಸದಾಗಿ ಬಣ್ಣ ಬಳಿಯಲಾಗಿದ್ದು, ಬಂಗಾರದ ಬಣ್ಣದಿಂದ ಚನ್ನಮ್ಮಾಜಿ ಕಂಗೊಳಿಸುತ್ತಿದ್ದಾಳೆ. ಚನ್ನಮ್ಮ ವೃತ್ತದ ನಾಲ್ಕೂ ರಸ್ತೆಗಳಲ್ಲಿ ಹಳದಿ-ಕೆಂಪು ಬಣ್ಣದ ಬಟ್ಟೆಗಳಿಂದ ನಿರ್ಮಿಸಿರುವ ಕಮಾನುಗಳು ಆಕರ್ಷಿಸುತ್ತಿವೆ. ಇನ್ನು ಚನ್ನಮ್ಮ ವೃತ್ತದ ಸುತ್ತಲೂ ಚೆಂಡು ಹೂವು, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಅಲ್ಲದೇ ರಸ್ತೆ ಪಕ್ಕದಲ್ಲಿ ರಾಜ್ಯೋತ್ಸವಕ್ಕೆ ಸ್ವಾಗತ ಕೋರುವ ಬ್ಯಾನರ್ಗಳ ಕಲರವ ಜೋರಾಗಿದೆ. ಅಶೋಕ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಕೋರ್ಟ್ ರಸ್ತೆ, ಕಾಲೇಜು ರಸ್ತೆ, ಅಂಬೇಡ್ಕರ್ ರಸ್ತೆ, ಬಸವೇಶ್ವರ ವೃತ್ತ ಸೇರಿ ನಗರದ ಪ್ರಮುಖ ವೃತ್ತ ಮತ್ತು ರಸ್ತೆಗಳನ್ನು ಹಳದಿ-ಕೆಂಪು ಬಣ್ಣದ ಬಟ್ಟೆ, ವಿದ್ಯುತ್ ದೀಪಗಳಿಂದ ಶೃಂಗರಿಸಿರುವುದು ವಿಶೇಷವಾಗಿದೆ.
ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಮಾತನಾಡಿ, "ಚನ್ನಮ್ಮ ವೃತ್ತದಲ್ಲಿ ಬೆಳಕು, ಪ್ರೇಕ್ಷಕರು ಕುಳಿತುಕೊಳ್ಳಲು ಗ್ಯಾಲರಿ, ಕುಡಿಯುವ ನೀರಿನ ವ್ಯವಸ್ಥೆ ಸೇರಿ ಎಲ್ಲ ರೀತಿಯ ಸಿದ್ಧತೆಯನ್ನು ಪಾಲಿಕೆಯಿಂದ ಕೈಗೊಳ್ಳಲಾಗಿದೆ. ಚನ್ನಮ್ಮ ಪುತ್ಥಳಿಗೆ ಪ್ರತಿ ವರ್ಷದಂತೆ ಬಣ್ಣ ಹಚ್ಚಲಾಗಿದ್ದು, ಈ ಬಾರಿ ಪುತ್ಥಳಿ ತುಂಬಾ ಆಕರ್ಷಣೀಯವಾಗಿದೆ" ಎಂದರು.