ಕರ್ನಾಟಕ

karnataka

ETV Bharat / state

ಬೆಳಗಾವಿಯಲ್ಲಿ ಕೊರೊನಾ ವ್ಯಾಕ್ಸಿನೇಷನ್‌ಗೆ ಭರದ ಸಿದ್ಧತೆ: ಯಾವುದೇ ಕ್ಷಣದಲ್ಲಿ ಏರ್‌ಲಿಫ್ಟ್ ಸಾಧ್ಯತೆ - ಕೊರೊನಾ ಲಸಿಕೆಗಳನ್ನು ಏರ್‌ಲಿಫ್ಟ್

ಕೊರೊ‌ನಾ ಲಸಿಕೆ ಬಂದ ಬಳಿಕ ಲಸಿಕಾಕರಣ ಮಾಡಲು ಬೆಳಗಾವಿ ಜಿಲ್ಲಾಡಳಿತ ಸಂಪೂರ್ಣ ಸಜ್ಜಾಗಿದೆ. ಈಗಾಗಲೇ ಎರಡು ಹಂತಗಳಲ್ಲಿ ಹತ್ತು ಕೇಂದ್ರಗಳಲ್ಲಿ ಡ್ರೈರನ್ ಯಶಸ್ವಿಯಾಗಿ ನಡೆಸಲಾಗಿದೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತಿದ್ದು, 30 ಸಾವಿರ ಆರೋಗ್ಯ ಕಾರ್ಯಕರ್ತರ ಹೆಸರು ನೋಂದಣಿಯಾಗಿದೆ.

preparations-for-corona-virus-vaccination-in-belgaum-news
ಬೆಳಗಾವಿಯಲ್ಲಿ ಕೊರೊನಾ ವ್ಯಾಕ್ಸಿನೇಷನ್‌ಗೆ ಭರದ ಸಿದ್ಧತೆ

By

Published : Jan 9, 2021, 5:43 PM IST

ಬೆಳಗಾವಿ:ಕುಂದಾನಗರಿಗೆ ಕೊರೊನಾ ಲಸಿಕೆಗಳನ್ನು ಏರ್‌ಲಿಫ್ಟ್ ಮಾಡಲಿದ್ದು, ಬೆಳಗಾವಿಯಿಂದ ಉತ್ತರ ಕರ್ನಾಟಕದ ಏಳು ಜಿಲ್ಲೆಗಳಿಗೆ ವ್ಯಾಕ್ಸಿನ್ ಸರಬರಾಜು ಮಾಡುವ ಸಾಧ್ಯತೆ ಇರುವ ಹಿನ್ನೆಲೆ, ವ್ಯಾಕ್ಸಿನ್ ಬರಮಾಡಿಕೊಳ್ಳಲು ಸಜ್ಜಾಗಿದೆ.

ಬೆಳಗಾವಿಯಲ್ಲಿ ಕೊರೊನಾ ವ್ಯಾಕ್ಸಿನೇಷನ್‌ಗೆ ಭರದ ಸಿದ್ಧತೆ

ಮಹಾಮಾರಿ ಕೊರೊನಾವನ್ನು ದೇಶದಿಂದ ಹೊಡೆದೋಡಿಸಲು ಭಾರತ ಸರ್ಕಾರ ಪಣತೊಟ್ಟಿದ್ದು, ಸಾರ್ವತ್ರಿಕ ಲಸಿಕಾಕರಣಕ್ಕೆ ಇಡೀ ದೇಶವೇ ಸಜ್ಜಾಗಿದೆ. ರಾಜ್ಯಕ್ಕೆ 13 ಲಕ್ಷ 90 ಸಾವಿರ ಲಸಿಕೆ ಬರುತ್ತಿದ್ದು, ಸೋಮವಾರದಿಂದಲೇ ಮೊದಲ ಹಂತದ ವ್ಯಾಕ್ಸಿನೇಷನ್‌ ಮಾಡುತ್ತೇವೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಈಗಾಗಲೇ ಮಾಹಿತಿ ನೀಡಿದ್ದಾರೆ.

ಬೆಳಗಾವಿಯಲ್ಲಿ ಕೊರೊನಾ ವ್ಯಾಕ್ಸಿನೇಷನ್‌ಗೆ ಭರದ ಸಿದ್ಧತೆ

ಉತ್ತರ ಕರ್ನಾಟಕದ ಲಸಿಕಾ ಸಂಗ್ರಹಣಾ ಕೇಂದ್ರವೆಂದೇ ಖ್ಯಾತಿ ಪಡೆದಿರುವ ಬೆಳಗಾವಿಯಲ್ಲಿ ಲಸಿಕೆ ಸಂಗ್ರಹಣೆ, ನಿರ್ವಹಣೆ, ಲಸಿಕಾಕರಣಕ್ಕೆ ಸಕಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಳಗಾವಿ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಲಸಿಕೆಗಳನ್ನು ಏರ್‌ಲಿಫ್ಟ್ ಮಾಡಲಿದ್ದು, ಅದನ್ನ ವ್ಯಾಕ್ಸಿನ್ ಡಿಪೋಗೆ ಸಾಗಿಸುವ ಸಿಬ್ಬಂದಿ ಮಾಹಿತಿ ನೀಡುವಂತೆ ಈಗಾಗಲೇ ಇ - ಮೇಲ್ ಮೂಲಕ ಮಾಹಿತಿ ಬಂದಿದೆ.

ಓದಿ: ಕೋವಿಡ್​ ವ್ಯಾಕ್ಸಿನ್​ ಹಾಕಿಸಿಕೊಂಡ ಮೊದಲ ಭಾರತೀಯ ನಟಿ ಶಿಲ್ಪಾ.. ಹೇಳಿದ್ದೇನು!?

ಬೆಳಗಾವಿಯ ಸಾಂಬ್ರಾ ಏರ್‌ಪೋರ್ಟ್‌ಗೆ ಲಸಿಕೆ ಬಂದ ತಕ್ಷಣ ಅದನ್ನು ಬೆಳಗಾವಿಯ ವ್ಯಾಕ್ಸಿನ್ ಡಿಪೋಗೆ ಸಾಗಣೆ ಮಾಡಿ, ಅಲ್ಲಿರುವ ವಾಕ್ ಇನ್ ಕೂಲರ್‌ನಲ್ಲಿ ಲಸಿಕೆ ಸಂಗ್ರಹಿಸಿಡಲು ಓರ್ವ ಫಾರ್ಮಸಿಸ್ಟ್ ಅಧಿಕಾರಿ, ಓರ್ವ ಚಾಲಕನ ನೇಮಕ ಮಾಡಿದ್ದು, ಅವರು ಮಾಹಿತಿಯನ್ನು ಮೇಲಧಿಕಾರಿಗಳಿಗೆ ತಿಳಿಸಿದ್ದಾರೆ.

ಇನ್ನು ಬೆಳಗಾವಿಯ ಸಾಂಬ್ರಾ ಏರ್‌ಪೋರ್ಟ್‌ನಿಂದ ವ್ಯಾಕ್ಸಿನ್ ಡಿಪೋಗೆ ಲಸಿಕೆಗಳನ್ನು ತರಲು ಇನ್ಸೂಲೇಟೆಡ್ ವ್ಯಾನ್ ಸಿದ್ಧವಾಗಿದೆ. ವ್ಯಾಕ್ಸಿನ್ ಡಿಪೋದಲ್ಲಿ ಸದ್ಯ ಒಂದು ವಾಕ್ ಇನ್ ಕೂಲರ್, ವಾಕ್ ಇನ್ ಫ್ರೀಜರ್ ಇದ್ದು ಜಿಲ್ಲಾಸ್ಪತ್ರೆಯ ಔಷಧ ಸಂಗ್ರಹಾಲಯದಲ್ಲಿ ಒಂದು ವಾಕ್ ಇನ್ ಕೂಲರ್ ಇದೆ. ಇಲ್ಲಿ 32 ಲಕ್ಷ ಲಸಿಕೆಗಳನ್ನು ಸಂಗ್ರಹಿಸಿಡುವ ಸಾಮರ್ಥ್ಯ ಇದೆ‌. ಇಲ್ಲಿ ಈಗ ಸುಮಾರು 4 ಲಕ್ಷ ರೆಗ್ಯುಲರ್ ವ್ಯಾಕ್ಸಿನ್‌ಗಳಿದ್ದು, ವ್ಯಾಕ್ಸಿನ್ ಸಂಗ್ರಹಣೆಗೆ ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದು ಬೆಳಗಾವಿ ಡಿಹೆಚ್‌ಒ ಡಾ.ಶಶಿಕಾಂತ್ ಮುನ್ಯಾಳ್ ಮಾಹಿತಿ ನೀಡಿದ್ದಾರೆ.

ಓದಿ: ತನ್ನಲ್ಲಿ ಚೀನಾ ವ್ಯಾಕ್ಸಿನ್​ ಕ್ಲಿನಿಕಲ್​ ಹಂತದಲ್ಲಿದ್ದರೂ ಬೇಗ ಲಸಿಕೆ ಕಳುಹಿಸುವಂತೆ ಬ್ರೆಜಿಲ್​ ಅಧ್ಯಕ್ಷ ಮೋದಿಗೆ ಪತ್ರ!

ಇನ್ನು ಕೊರೊ‌ನಾ ಲಸಿಕೆ ಬಂದ ಬಳಿಕ ಲಸಿಕಾಕರಣ ಮಾಡಲು ಬೆಳಗಾವಿ ಜಿಲ್ಲಾಡಳಿತ ಸಂಪೂರ್ಣ ಸಜ್ಜಾಗಿದೆ. ಈಗಾಗಲೇ ಎರಡು ಹಂತಗಳಲ್ಲಿ ಹತ್ತು ಕೇಂದ್ರಗಳಲ್ಲಿ ಡ್ರೈರನ್ ಯಶಸ್ವಿಯಾಗಿ ನಡೆಸಲಾಗಿದೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತಿದ್ದು, 30 ಸಾವಿರ ಆರೋಗ್ಯ ಕಾರ್ಯಕರ್ತರ ಹೆಸರು ನೋಂದಣಿಯಾಗಿದೆ.

ಇವರಿಗೆ 180 ಕೋಲ್ಡ್ ಚೈನ್ ಪಾಯಿಂಟ್ಸ್ ಗಳಲ್ಲಿ ವ್ಯಾಕ್ಸಿನೇಷನ್‌ ಮಾಡಲಾಗುತ್ತಿದ್ದು, ವ್ಯಾಕ್ಸಿನೇಷನ್‌ ಮಾಡುವ ಸಿಬ್ಬಂದಿಗೆ ಇಂದು ಅಂತಿಮ ಹಂತದ ತರಬೇತಿ ನೀಡಲಾಯಿತು. ಬೆಳಗಾವಿ ಜಿಲ್ಲಾ ಲಸಿಕಾಕರಣ ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಡಾ.ಈಶ್ವರ್ ಗಡಾದ್ ನೇತೃತ್ವದಲ್ಲಿ ಜೂಮ್ ಆ್ಯಪ್ ಮೂಲಕ ಆನ್‌ಲೈನ್ ತರಬೇತಿ ನೀಡಲಾಯಿತು. ಇನ್ನು ನಾಳೆ ಬೆಳಗಾವಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬೆಳಗಾವಿ ಜಿಲ್ಲೆಯ 180 ಕೋಲ್ಡ್ ಚೈನ್ ಪಾಯಿಂಟ್ಸ್‌ಗಳ 176 ಆರೋಗ್ಯಾಧಿಕಾರಿಗಳಿಗೆ ಅಂತಿಮ ಹಂತದ ತರಬೇತಿ ನೀಡಲಾಗುವುದು ಎಂದು ಡಿಸ್ಟ್ರಿಕ್ಟ್ ಇಮ್ಯುನೈಸೇಷನ್ ಆಫೀಸರ್ ಡಾ.ಈಶ್ವರ್ ಗಡಾದ್ ತಿಳಿಸಿದ್ದಾರೆ.

ರಾಜ್ಯಕ್ಕೆ ಕೊರೊನಾ ಲಸಿಕೆ ಮೊದಲು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಏರ್‌ಲಿಫ್ಟ್ ಆಗಿ ಬಳಿಕ ಅದೇ ವಿಶೇಷ ವಿಮಾನ ಬೆಂಗಳೂರಿಗೆ ಹೋಗುವ ಸಾಧ್ಯತೆ ಇದೆ. ಯಾವುದೇ ಕ್ಷಣದಲ್ಲೂ ಬೆಳಗಾವಿಗೆ ಕೊರೊನಾ ಲಸಿಕೆ ಆಗಮಿಸುವ ನಿರೀಕ್ಷೆ ಇರುವುದರಿಂದ ಬೆಳಗಾವಿ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ ಅಲರ್ಟ್ ಆಗಿದ್ದಾರೆ. ಲಸಿಕೆ ಬಂದ ಬಳಿಕ ಉತ್ತರ ಕರ್ನಾಟಕದ ಏಳು ಜಿಲ್ಲೆಗಳಿಗೆ ಲಸಿಕೆ ಸರಬರಾಜು ಮಾಡಲು ಪ್ಲ್ಯಾನ್ ಮಾಡಿದ್ದು, ಮೊದಲ ಹಂತದ ಸಾರ್ವತ್ರಿಕ ಲಸಿಕಾಕರಣಕ್ಕೆ ಕುಂದಾನಗರಿ ಸಂಪೂರ್ಣ ಸಜ್ಜಾಗಿದೆ.

ABOUT THE AUTHOR

...view details