ಅಥಣಿ(ಬೆಳಗಾವಿ):ಗರ್ಭಿಣಿಯರಿಗೆ ಸೂಕ್ತ ಸಮಯದಲ್ಲಿ ಕೊರೊನಾ ಪರೀಕ್ಷೆ ಮಾಡದೆ ಗಂಟೆಗಟ್ಟಲೆ ಕಾಯಿಸಿದ ಆಸ್ಪತ್ರೆ ಸಿಬ್ಬಂದಿ ಹಾಗೂ ವೈದ್ಯಾಧಿಕಾರಿಗಳನ್ನು ಪೋಷಕರು ತರಾಟೆಗೆ ತೆಗೆದುಕೊಂಡಿರುವ ಘಟನೆ ಅಥಣಿ ಸಮುದಾಯ ಆಸ್ಪತ್ರೆಯಲ್ಲಿ ನಡೆದಿದೆ.
ಗರ್ಭಿಣಿಯರ ಕೊರೊನಾ ಪರೀಕ್ಷೆ ವಿಳಂಬ.. ಪೋಷಕರಿಂದ ವೈದ್ಯಕೀಯ ಸಿಬ್ಬಂದಿಗೆ ತರಾಟೆ ಕೊರೊನಾ ಪರೀಕ್ಷೆ ಕಡ್ಡಾಯ ಎಂಬ ನಿಟ್ಟಿನಲ್ಲಿ ವೈದ್ಯಕೀಯ ಸಿಬ್ಬಂದಿ ಗರ್ಭಿಣಿಯರನ್ನು ಗಂಟಲು ದ್ರವ ಪರೀಕ್ಷೆಗೆ ಕಳಿಸಿದೆ. ಅಲ್ಲಿ ಅವರನ್ನು ಗಂಟೆಗಟ್ಟಲೆ ಕಾಯಿಸಿದ್ದರಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಗರ್ಭಿಣಿಯರ ಪೋಷಕರು ಆಸ್ಪತ್ರೆ ಮುಖ್ಯಾಧಿಕಾರಿ ಸಿ ಎಸ್ ಪಾಟೀಲ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ಪೊಲೀಸರ ಮಧ್ಯಸ್ಥಿಕೆಯಲ್ಲಿ ವಿವಾದ ಬಗೆಹರಿದಿದೆ.
ಈವರೆಗೆ ಅಥಣಿ ಮತ್ತು ಕಾಗವಾಡ ತಾಲೂಕಿನಲ್ಲಿ 4093 ಮಂದಿಯ ಗಂಟಲು ದ್ರವ ಸಂಗ್ರಹಿಸಲಾಗಿದ್ದು, 400ಕ್ಕೂ ಅಧಿಕ ವರದಿಗಳ ಫಲಿತಾಂಶ ಬರಲು ಇನ್ನೂ ಬಾಕಿ ಇವೆ. ಕೊರೊನಾ ಪರೀಕ್ಷೆ ಮಾಡಲು ಹೊರಗುತ್ತಿಗೆ ಆಧಾರದಲ್ಲಿ ಲ್ಯಾಬ್ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಕೆಲಸ ನಿಧಾನವಾಗಿ ಸಾಗುತ್ತಿರುವುದರಿಂದ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ.
ನಿನ್ನೆಯವರೆಗೆ ಅಥಣಿ ಮತ್ತು ಕಾಗವಾಡ ತಾಲೂಕಿನಲ್ಲಿ ಒಟ್ಟು 725 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. 56 ಜನ ಸಾವನ್ನಪ್ಪಿದ್ದಾರೆ. ಸದ್ಯ 151 ಸಕ್ರೀಯ ಪ್ರಕರಣಗಳಿದ್ದರೂ ಆರೋಗ್ಯ ಇಲಾಖೆಯ ಸಿಬ್ಬಂದಿಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.