ಚಿಕ್ಕೋಡಿ:ಸಾರ್ವಜನಿಕ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸಾಂಸ್ಕೃತಿಕ ಸ್ಪರ್ಧೆಯಲ್ಲಿ, ವಿದ್ಯಾರ್ಥಿಗಳೂ ಸೇರಿ ವೀಕ್ಷಕರೂ ಸಹ ಸುಡು ಬಿಸಿಲಿನಲ್ಲಿಯೇ ಕುಳಿತು ಕಾರ್ಯಕ್ರಮ ವೀಕ್ಷಿಸುವ ದೃಶ್ಯ ಕಂಡುಬಂತು.
ಗುರುವಾರ ಬೆಳಗ್ಗೆ 10 ಗಂಟೆಗೆ ಆರಂಭವಾಗಬೇಕಿದ್ದ ಕಾರ್ಯಕ್ರಮ ಒಂದು ಗಂಟೆ ತಡವಾಗಿ ಆರಂಭವಾಯಿತು. ಆದರೆ, ಸ್ಪರ್ಧೆಯಲ್ಲಿ ಭಾಗವಹಿಸಬೇಕಾಗಿದ್ದ ಜಿಲ್ಲೆಯ ಎಲ್ಲಾ ವಲಯಗಳ ಮಕ್ಕಳನ್ನು ಬೆಳಗ್ಗೆ 9 ಗಂಟೆಗೆಯೇ ಕರೆದುಕೊಂಡು ಬಂದು ಸುಡುವ ಬಿಸಿಲಿನಲ್ಲಿಯೇ ಕೂರಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯಲ್ಲಿ ಭಾಗವಹಿಸುವ ಅತಿಥಿಗಳಿಗೆ ಮಾತ್ರ ಪೆಂಡಾಲ್ ಹಾಕಲಾಗಿತ್ತು.
ಸುಡುವ ಬಿಸಿಲಿನಲ್ಲಿಯೇ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಸರ್ಕಾರ ಮಕ್ಕಳಲ್ಲಿ ಹುದುಗಿರುವ ಸೂಕ್ತ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳಿಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಆದ್ರೆ, ಇಂತಹ ಕಾರ್ಯಕ್ರಮ ಅನುಷ್ಠಾನಗೊಳಿಸಬೇಕಾದ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಮಕ್ಕಳು ಸರಿಯಾದ ವೇದಿಕೆ ದೊರೆಯದೆ ವಂಚಿತರಾಗುತ್ತಿದ್ದಾರೆಂಬುದಕ್ಕೆ ಚಿಕ್ಕೋಡಿಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವೇ ಸಾಕ್ಷಿಯಾಗಿದೆ.
ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಆರಂಭವಾಗುವಷ್ಟರಲ್ಲಿಯೇ ಸುಮಾರು ಎರಡು ಗಂಟೆಗಳ ಬಿಸಿಲಿನಲ್ಲಿಯೇ ಕಾದು ಕುಳಿತಿದ್ದ ಮಕ್ಕಳು ಮತ್ತು ಶಿಕ್ಷಕರು ಖುರ್ಚಿಗಳನ್ನು ಖಾಲಿ ಮಾಡಿ ನೆರಳಿನತ್ತ ಸಾಗಿದ್ದರು. ಹೀಗಾಗಿ ಕಾರ್ಯಕ್ರಮ ಉದ್ಘಾಟಿಸಿದ ಡಿಡಿಪಿಐ ಮೋಹನ ಹಂಚಾಟೆಯವರು ಭಾಷಣ ಮಾಡುತ್ತಿದ್ದಾಗ ವೇದಿಕೆ ಎದುರಿನ ಎಲ್ಲಾ ಖುರ್ಚಿಗಳು ಖಾಲಿಯಾಗಿದ್ದವು. ಖುರ್ಚಿಗಳು ಖಾಲಿಯಾಗಿರುವುದನ್ನು ಕಂಡು ಡಿಡಿಪಿಐ ಮೋಹನ ಹಂಚಾಟೆಯವರು ತಮ್ಮ ಭಾಷಣ ಮೊಟಕುಗೊಳಿಸಿ ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳು ಸ್ಪರ್ಧೆಗಳು ನಡೆಯುವ ಕೊಠಡಿಗೆ ಹೋಗಬೇಕೆಂದು ಖಾಲಿ ಖುರ್ಚಿಗಳಿಗೆ ಹೇಳಿದರು.
ಆದರೆ, ಮಕ್ಕಳ ಬಗ್ಗೆ ಡಿಡಿಪಿಐ ಸೇರಿದಂತೆ ಜಿಲ್ಲಾ ಮತ್ತು ತಾಲೂಕಾ ಮಟ್ಟದ ನಮ್ಮ ಅಧಿಕಾರಿಗಳಿಗೆ ಯಾವುದೇ ಕಾಳಜಿ ಇಲ್ಲ. ಇದೊಂದು ಮಕ್ಕಳ ಪ್ರತಿಭೆ ಕುಗ್ಗಿಸುವ ಕಾರ್ಯಕ್ರಮ ಎಂಬ ಮಾತುಗಳು ಶಿಕ್ಷಕರು ಮಾತನಾಡಿಕೊಳ್ಳುತ್ತಿದ್ದರು.