ಬೆಳಗಾವಿ: 'ಸಚಿವ ಶ್ರೀರಾಮುಲು ಅವರ ಖಾತೆ ಬದಲಾವಣೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ' ಎಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಅಚ್ಛರಿಯ ಹೇಳಿಕೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಎಸ್.ಟಿ ಸಮಾಜಕ್ಕೆ ಮೀಸಲಾತಿ ಹೆಚ್ಚಿಸುವ ಸಂಬಂಧ ನಾನು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. ರಾಜಕೀಯದಲ್ಲಿ ಆದ ಬದಲಾವಣೆ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ ಬಿಜೆಪಿ ಸರ್ಕಾರ ವಾಲ್ಮೀಕಿ ಸಮಾಜವನ್ನು ನಿರ್ಲಕ್ಷಿಸುತ್ತಿದೆ' ಎಂದರು.
ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಹೇಳಿಕೆ 'ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ರಾಮುಲು ಅವರನ್ನು ಡಿಸಿಎಂ ಮಾಡುತ್ತಾರೆ ಎಂದುಕೊಂಡಿದ್ವಿ. ಆದರೆ ಬಿಜೆಪಿ ಸರ್ಕಾರ ರಾಮುಲು ಅವರನ್ನು ಬಿಟ್ಟು ಬೇರೆಯವರಿಗೆ ಅವಕಾಶ ನೀಡಿದ್ದಾರೆ. ಈ ಸಂಬಂಧ ನಾನೇ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ನಾಯಕರ ಗಮನ ಸೆಳೆದಿದ್ದೇನೆ' ಎಂದು ಹೇಳಿದರು.
'ಎಸ್.ಟಿ. ಮೀಸಲಾತಿ ಹೆಚ್ಚಿಸಲು ಅಕ್ಟೋಬರ್ 20ರಿಂದ ಫ್ರೀಡಂ ಪಾರ್ಕ್‌ನಲ್ಲಿ ಧರಣಿ ನಡೆಸುತ್ತೇವೆ. ವಾಲ್ಮೀಕಿ ಜಯಂತಿಗೂ ಮುನ್ನವೇ ನಮ್ಮ ಬೇಡಿಕೆ ಈಡೇರಬೇಕು. ಹಿಂದಿನ ಸಮ್ಮಿಶ್ರ ಸರ್ಕಾರ ಇದಕ್ಕಾಗಿ ಆಯೋಗ ರಚಿಸಿತ್ತು. ಆದರೆ ಬೇಡಿಕೆ ಈಡೇರುವ ಮುನ್ನವೇ ಸಮ್ಮಿಶ್ರ ಸರ್ಕಾರ ಪತನವಾಯಿತು' ಎಂದು ತಿಳಿಸಿದರು.
'ಮೀಸಲಾತಿ ಹೆಚ್ಚಿಸಲು ನಮ್ಮ ಸಮಾಜದ ಜನಪ್ರತಿನಿಧಿಗಳು ಸಿಎಂ ಮನವಿ ಮಾಡಿದ್ದಾರೆ. ವರದಿ ಬಂದ ಮೇಲೆ ಕ್ರಮ ಕೈಗೊಳ್ಳುವುದಾಗಿ ಸಿಎಂ ಹೇಳಿದ್ದಾರೆ. ವರದಿ ಬಂದು 3 ತಿಂಗಳು 13 ದಿನಗಳಾದರೂ ಸಿಎಂ ಯಡಿಯೂರಪ್ಪ ನಮ್ಮ ಬೇಡಿಕೆ ಸ್ಪಂದಿಸುತ್ತಿಲ್ಲ. ಹೀಗಾಗಿ ರಾಜ್ಯಾದ್ಯಂತ 10 ದಿನ ಧರಣಿ ನಡೆಸುತ್ತಿದ್ದೇವೆ. ಬಳಿಕ ಬೆಂಗಳೂರು ಚಲೋ ಹೋರಾಟ ಆರಂಭಿಸುತ್ತೇವೆ. ಸಿಎಂ ಬಳಿಯೂ ನಿಯೋಗ ತೆರಳಿ ಮನವಿ ಮಾಡುತ್ತೇವೆ 'ಎಂದರು.