ಬೆಳಗಾವಿ :ವಾಯವ್ಯ ಶಿಕ್ಷಕರ ಮತಕ್ಷೇತ್ರದ ವಿಧಾನಪರಿಷತ್ ಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ, ಕಾಂಗ್ರೆಸ್ನ ಮಾಮ ಮೀಸೆ ತಿರುವಿದ್ದಾರೆ. ಹೆಚ್ಚು ಗಮನ ಸೆಳೆದಿದ್ದ ವಾಯವ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ನ ಪ್ರಕಾಶ ಹುಕ್ಕೇರಿ ಜಯಗಳಿಸಿದ್ದಾರೆ. ಎರಡು ಬಾರಿ ಸದಸ್ಯರಾಗಿದ್ದ ಅರುಣ್ ಶಹಾಪುರ ಹಿರಿಯ ರಾಜಕಾರಣಿಗೆ ಶರಣಾಗಿದ್ದಾರೆ. ಕಾಂಗ್ರೆಸ್ ಹಲವು ವರ್ಷಗಳ ಬಳಿಕ ಸ್ಥಾನವನ್ನು ವಾಪಸ್ ಪಡೆದುಕೊಂಡಿದೆ.
ಹ್ಯಾಟ್ರಿಕ್ ಗೆಲುವಿಗೆ ಅಡ್ಡಿ: ಶಿಕ್ಷಕನಲ್ಲದಿದ್ದರೂ ಪ್ರಕಾಶ ಹುಕ್ಕೇರಿ ವಾಯವ್ಯ ಕ್ಷೇತ್ರದ ಶಿಕ್ಷಕರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಚುನಾವಣೆ ಆರಂಭದಿಂದಲೂ ಪ್ರಕಾಶ ಹುಕ್ಕೇರಿಯವರ ವಯಸ್ಸು, ಪಡೆದ ಶಿಕ್ಷಣದ ಬಗ್ಗೆ ವ್ಯಂಗ್ಯವಾಡುತ್ತಿದ್ದ ಬಿಜೆಪಿ ನಾಯಕರಿಗೆ ಈ ಫಲಿತಾಂಶ ಮುಜುಗರ ತರಿಸಿದೆ. ಹ್ಯಾಟ್ರಿಕ್ ಗೆಲುವಿನ ತವಕದಲ್ಲಿದ್ದ ಅರುಣ್ ಶಾಹಾಪುರಗೆ ಪ್ರಕಾಶ ಹುಕ್ಕೇರಿ ಅಡ್ಡಿಯಾದರು.
ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಯ ವ್ಯಾಪ್ತಿ ಹೊಂದಿರುವ ವಾಯವ್ಯ ಕ್ಷೇತ್ರದಲ್ಲಿ ಬಿಜೆಪಿ ಶಾಸಕರೇ ಅಧಿಕಾರದಲ್ಲಿದ್ದಾರೆ. 33 ಕ್ಷೇತ್ರಗಳ ಪೈಕಿ 22 ಬಿಜೆಪಿ ಶಾಸಕರಿದ್ದಾರೆ. ಇದರಲ್ಲಿ ನಾಲ್ವರು ಸಚಿವರೂ ಇದ್ದಾರೆ. ಸಾಲದೆಂಬಂತೆ ಐವರು ಬಿಜೆಪಿಯ ಸದಸ್ಯರಿದ್ದಾರೆ. ಹೀಗಿದ್ದರೂ ಪ್ರಕಾಶ ಹುಕ್ಕೇರಿ ಗೆಲುವು ದಾಖಲಿಸಿರುವುದು ಕಾಂಗ್ರೆಸ್ನ ಉತ್ಸಾಹಕ್ಕೆ ಕಾರಣವಾಗಿದೆ. ಮತ್ತೊಂದೆಡೆ ಈ ಸೋಲು ಬಿಜೆಪಿ ಹೈಕಮಾಂಡ್ ನಾಯಕರ ಕಣ್ಣು ಕೆಂಪಾಗಿಸಿದೆ.
ಅರುಣ್ ಸೋಲಿಗೆ ಯಾರು ಹೊಣೆ?: ಬಿಜೆಪಿಗೆ ಬೆಳಗಾವಿಯ ಹೊಂದಾಣಿಕ ರಾಜಕಾರಣವೇ ದೊಡ್ಡ ಪೆಟ್ಟು ನೀಡುತ್ತಿದೆ. ಅದನ್ನು ಸರಿಮಾಡಲು ಬಿಜೆಪಿ ಹೈಕಮಾಂಡ್‍ಗೂ ಸಾಧ್ಯವಾಗುತ್ತಿಲ್ಲ. ಕಳೆದ ಪರಿಷತ್ ಚುನಾವಣೆಯಲ್ಲಿ ಮಹಾಂತೇಶ ಕವಟಗಿಮಠ ಸೋಲಿನಿಂದ ಬಿಜೆಪಿ ಪಾಠ ಕಲಿತಂತೆ ಕಾಣುತ್ತಿಲ್ಲ. ಅರುಣ್ ಶಹಾಪುರ ಸೋಲು ಇದೀಗ ಬಿಜೆಪಿಗೆ ದೊಡ್ಡ ಪೆಟ್ಟು ನೀಡಿದೆ. ಅಲ್ಲದೇ ಜಿಲ್ಲೆಯಮೂವರು ಘಟಾನುಘಟಿ ಬಿಜೆಪಿ ನಾಯಕರಿಗೆ ಶಹಾಪುರ ಸೋಲು ದೊಡ್ಡ ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ.
ಇದನ್ನೂ ಓದಿ: ನನ್ನ ಸೋಲಿಗೆ ಹಣದ ಹೊಳೆ ಕಾರಣ ; ಬಿಜೆಪಿ ಪರಾಜಿತ ಅಭ್ಯರ್ಥಿ ಅರುಣ್ ಶಾಹಾಪುರ
ಈ ಮೊದಲಿಗೆ ಎರಡು ಅವಧಿಗೆ ಗೆದ್ದಿದ್ದ ಅರುಣ್ ಶಹಾಪುರ ಶಿಕ್ಷಕರ ವಿಶ್ವಾಸ ಗಳಿಸುವಲ್ಲಿ ವಿಫಲರಾಗಿದ್ದರು. ಈ ಚುನಾವಣೆಯಲ್ಲಿ ಶಹಾಪುರ ಸೋಲಿಗೆ ಇದೂ ಮುಖ್ಯ ಕಾರಣ ಎನ್ನಲಾಗುತ್ತಿದೆ. ಮತ್ತೊಂದೆಡೆ ಸಚಿವರಾದ ಗೋವಿಂದ ಕಾರಜೋಳ, ಉಮೇಶ ಕತ್ತಿ, ಶಶಿಕಲಾ ಜೊಲ್ಲೆ ಹಾಗೂ ಮುರಗೇಶ್ ನಿರಾಣಿಯಂಥ ಘಟಾನುಘಟಿ ಸಚಿವರಿದ್ದರೂ ಶಹಾಪುರ ಗೆಲುವು ಸಾಧ್ಯವಾಗಲಿಲ್ಲ.
ವರ್ಕೌಟ್ ಆಯ್ತಾ ಕಾಂಗ್ರೆಸ್ ಪ್ಲ್ಯಾನ್?: ಅರುಣ್ ಶಹಾಪುರ ಬಗೆಗಿದ್ದ ವಿರೋಧಿ ಅಲೆಯನ್ನು ಮನಗಂಡಿದ್ದ ಕಾಂಗ್ರೆಸ್ ಅಳೆದುತೂಗಿ ಅಭ್ಯರ್ಥಿ ಆಯ್ಕೆ ಮಾಡಿತ್ತು. ಮೂರು ಜಿಲ್ಲೆಗಳಲ್ಲಿ ಅತಿ ಹೆಚ್ಚು ಮತ ಇರುವುದೇ ಬೆಳಗಾವಿಯಲ್ಲಿ. ಜಾತಿ, ಮತ ಹಾಗೂ ಹಿರಿತನ ಆಧರಿಸಿ ಕಾಂಗ್ರೆಸ್ ಪ್ರಕಾಶ ಹುಕ್ಕೇರಿಗೆ ಟಿಕೆಟ್ ನೀಡಿತ್ತು. ಐದು ಸಲ ಶಾಸಕರಾಗಿ, ಒಂದು ಸಲ ಪರಿಷತ್ ಸದಸ್ಯರಾಗಿ, ಮತ್ತೊಂದು ಬಾರಿಗೆ ಸಂಸತ್ ಸದಸ್ಯರಾಗಿ, ಮೂರು ಸಲ ಸಚಿವರಾಗಿದ್ದ ಪ್ರಕಾಶ ಹುಕ್ಕೇರಿ ಮೂರು ಜಿಲ್ಲೆಗಳಲ್ಲಿ ಪ್ರಭಾವ ಹೊಂದಿದ್ದರು. ಮತ್ತೊಂದೆಡೆ ಪ್ರಬಲ ಪಂಚಮಸಾಲಿ ಸಮಾಜಕ್ಕೆ ಸೇರಿದವರಿವರು. ಈ ಎಲ್ಲ ಲೆಕ್ಕಾಚಾರ ಆಧಾರದ ಮೇಲೆಯೇ ಕಾಂಗ್ರೆಸ್ ಟಿಕೆಟ್ ನೀಡಿ, ಇದೀಗ ಯಶಸ್ಸು ಕಂಡಿದೆ.
ವಿಧಾನಸೌಧಕ್ಕೆ ಅಪ್ಪ-ಮಗ: ಹಿರಿಯ ರಾಜಕೀಯ ನಾಯಕರಾಗಿರುವ ಪ್ರಕಾಶ ಹುಕ್ಕೇರಿ ಕಳೆದ ನಾಲ್ಕು ದಶಕಗಳಿಂದ ಸಕ್ರಿಯ ರಾಜಕಾರಣದಲ್ಲಿದ್ದಾರೆ. ಈ ಮೊದಲು ಸ್ಪರ್ಧಿಸುತ್ತಿದ್ದ ಚಿಕ್ಕೋಡಿ-ಸದಲಗಾ ವಿಧಾನಸಭೆ ಕ್ಷೇತ್ರದಿಂದ ಪ್ರಕಾಶ ಹುಕ್ಕೇರಿ ಪುತ್ರ ಗಣೇಶ ಹುಕ್ಕೇರಿ ಶಾಸಕರಾಗಿ ಕಳೆದ ಎರಡು ಅವಧಿಯಿಂದ ಆಯ್ಕೆಯಾಗುತ್ತಿದ್ದಾರೆ. ಇದೀಗ ಪ್ರಕಾಶ ಹುಕ್ಕೇರಿಯೂ ಪರಿಷತ್ ಸದಸ್ಯರಾಗಿದ್ದಾರೆ. ಇನ್ನು ಮುಂದೆ ಅಪ್ಪ-ಮಗ ಇಬ್ಬರೂ ವಿಧಾನಸೌಧಕ್ಕೆ ತೆರಳಲಿದ್ದಾರೆ.
ಯಾರಿಗೆ ಎಷ್ಟು ಮತ?: ವಾಯವ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ 5045 ಮತಗಳ ಅಂತರದ ಗೆಲುವು ದಾಖಲಿಸಿದ್ದಾರೆ. ಈ ಕ್ಷೇತ್ರದಲ್ಲಿ ಒಟ್ಟು 21,402 ಮತ ಚಲಾವಣೆಗೊಂಡಿದ್ದವು. ಪ್ರಕಾಶ ಹುಕ್ಕೇರಿ 11,460 ಮತಗಳನ್ನು ಪಡೆದಿದ್ದರೆ, ಬಿಜೆಪಿಯ ಅರುಣ್ ಶಹಾಪುರ 6,405 ಮತ ಪಡೆದಿದ್ದಾರೆ. ಜೆಡಿಎಸ್ ಅಭ್ಯರ್ಥಿ ಚಂದ್ರಶೇಖರ ಲೋಣಿ 544 ಹಾಗೂ ಪಕ್ಷೇತರ ಅಭ್ಯರ್ಥಿ ಎನ್.ಬಿ ಬನ್ನೂರ 1009 ಮತಗಳನ್ನು ಪಡೆದಿದ್ದರು. ಈ ಕ್ಷೇತ್ರದಲ್ಲಿ ಒಟ್ಟು 1270 ಮತಗಳು ತಿರಸ್ಕೃತಗೊಂಡಿವೆ.