ಬೆಳಗಾವಿ: ಸಿದ್ದರಾಮಯ್ಯ ತುಷ್ಠೀಕರಣದ ರಾಜಕಾರಣ ಬಿಟ್ಟು ಡೆವಲಪ್ಮೆಂಟ್ ರಾಜಕಾರಣದ ಬಗ್ಗೆ ಮಾತನಾಡಬೇಕು. ಕಾಂಗ್ರೆಸ್‌ನ ಅಧೋಗತಿಗೆ ಒಂದು ಜನಾಂಗದ ತುಷ್ಠೀಕರಣವೇ ಕಾರಣ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ದೂರಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಾಂಗ್ರೆಸ್ ಪಾರ್ಟಿ ಅಭ್ಯರ್ಥಿಗೂ ಸಾಕಾಗಿದೆ. ಯಾಕಾದರೂ ಚುನಾವಣೆಗೆ ಸ್ಪರ್ಧೆ ಮಾಡಿದ್ದೇನೆ ಎಂಬ ಪರಿಸ್ಥಿತಿ ಅವರಿಗೆ ಬಂದಿದೆ. ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್ ಪಾರ್ಟಿ ಹೇಳಲು ಹೆಸರಿಲ್ಲದಂತೆ ಹೋಗಲಿದ್ದು, ಅವರನ್ನು ದುರ್ಬಿನ್ ಹಿಡಿದು ಹುಡುಕುವ ಪರಿಸ್ಥಿತಿ ಬರಲಿದೆ ಎಂದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಾರ್ಟಿಯನ್ನು ಸೋಲಿಸಲಿಕ್ಕೆ ಇಲ್ಲಿರುವ ಕಾಂಗ್ರೆಸ್ ಅಭ್ಯರ್ಥಿಗಳೇ ಸಾಕು. ಸಿದ್ದರಾಮಯ್ಯನವ್ರು ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಗೋಹತ್ಯೆ ನಿಷೇಧವನ್ನು ವಾಪಸ್ ಪಡೆದುಕೊಳ್ಳುತ್ತೇವೆ ಎನ್ನುತ್ತಾರೆ. ಮತ್ತೊಂದೆಡೆ ಟಿಪ್ಪು ಸುಲ್ತಾನ್ ಜಯಂತಿ ಮಾಡುವುದಾಗಿ ಹೇಳ್ತಾರೆ.
ಟಿಪ್ಪು ಸುಲ್ತಾನನ ಜಯಂತಿ ಆಚರಿಸುತ್ತೇವೆ ಎನ್ನುತ್ತಾರೆ. ಆದ್ರೆ, ಗೋ ಸಂರಕ್ಷಣೆ ಮಾಡಿದ ಶಿವಾಜಿ ಮಹಾರಾಜರ ಬಗ್ಗೆ ಸಿದ್ದರಾಮಯ್ಯ ಮಾತನಾಡೋದಿಲ್ಲ. ಗೋಹತ್ಯೆ ನಿಷೇಧ ಕಾನೂನು ರದ್ದು ಮಾಡುತ್ತೇವೆ ಅನ್ನುತ್ತಾರೆ. ಹೀಗಾಗಿ ಬೆಳಗಾವಿ ಜನರು ಇವರ ನಿಲುವನ್ನು ಅರ್ಥ ಮಾಡಿಕೊಳ್ಳಬೇಕು.
ಕಾಂಗ್ರೆಸ್ ಪಕ್ಷ ಒಂದು ಜನಾಂಗವನ್ನು ಓಲೈಸುವ ಸಲುವಾಗಿ ತುಷ್ಠೀಕರಣ ಮಾಡುವುದೇ ದೇಶದಲ್ಲಿ ಕಾಂಗ್ರೆಸ್‌ನ ಈ ಸ್ಥಿತಿಗೆ ಕಾರಣವಾಗಿದೆ. ಇಷ್ಟಾದರೂ ಸಿದ್ದರಾಮಯ್ಯಗೆ ಬುದ್ಧಿ ಬಂದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಅಭ್ಯರ್ಥಿ ಪರ ಭರ್ಜರಿ ಪ್ರಚಾರ:
ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಪರ ಬೈಕ್ ರ್ಯಾಲಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವ ಜಗದೀಶ್ ಶೆಟ್ಟರ್ ಅವರಿಂದ ಚಾಲನೆ ಸಿಕ್ಕಿತು. ಈ ವೇಳೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಸ್ವತಃ ತಾವೇ ಸ್ಕೂಟಿ ಓಡಿಸುವ ಮೂಲಕ ಚೆನ್ನಮ್ಮ ವೃತ್ತದಿಂದ ಬೆಳಗಾವಿಯ ವಿವಿಧ ಪ್ರದೇಶದಲ್ಲಿ ಬೈಕ್ ರ್ಯಾಲಿ ನಡೆಸಿದರು. ಬೈಕ್ ರ್ಯಾಲಿಗೆ ಶಾಸಕ ಅನಿಲ್ ಬೆನಕೆ, ಸುರೇಶ್ ಅಂಗಡಿ ಪುತ್ರಿಯರಾದ ಸ್ಫೂರ್ತಿ ಪಾಟೀಲ, ಶ್ರದ್ಧಾ ಸಾಥ್ ನೀಡಿದರು.
ಬಿಜೆಪಿ ಅಭ್ಯರ್ಥಿ ಪರ ಭರ್ಜರಿ ಪ್ರಚಾರ ಈ ವೇಳೆ ಮಾತನಾಡಿದ ಸಚಿವ ಜಗದೀಶ ಶೆಟ್ಟರ್, ಬೆಳಗಾವಿ ಜಿಲ್ಲೆಯಲ್ಲಿ ಈಗಾಗಲೇ ಪಾದಯಾತ್ರೆ, ಬೈಕ್ ರ್ಯಾಲಿ, ಮಹಿಳೆಯರ ಸಮಾವೇಶ ಸೇರಿದಂತೆ ಇತರೆ ಕಾರ್ಯಕ್ರಮಗಳ ಮೂಲಕ ಮತದಾರರನ್ನು ಭೇಟಿ ಆಗಿ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಲಾಗಿದೆ. ಹೀಗಾಗಿ ಬಿಜೆಪಿ ಅಭ್ಯರ್ಥಿ ನೂರಕ್ಕೆ ನೂರರಷ್ಟು ಗೆಲ್ಲುವುದು ಖಚಿತ ಎಂದರು.
ಇದನ್ನೂ ಓದಿ:ದಾಡಿ ಬಿಟ್ಟವರೆಲ್ಲ ರವೀಂದ್ರನಾಥ್ ಟ್ಯಾಗೋರ್ ಆಗಲ್ಲ : ಮೋದಿ ಕಾಲೆಳೆದ ಮಲ್ಲಿಕಾರ್ಜುನ್ ಖರ್ಗೆ