ಬೆಳಗಾವಿ:ಗಣೇಶೋತ್ಸವಕ್ಕೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಇವೆ. ಹೀಗಾಗಿ ಗಣೇಶ ಮೂರ್ತಿ ತಯಾರಕರು ಹಗಲು ರಾತ್ರಿ ಎನ್ನದೇ ಕೆಲಸ ಮಾಡುತ್ತಿದ್ದಾರೆ. ಬೆಳಗಾವಿಯಲ್ಲಿ ಎಲ್ಲೆಡೆ ಪಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿಗಳೇ ರಾರಾಜಿಸುತ್ತಿವೆ. ಆದರೆ ಇಲ್ಲೊಂದು ಕುಟುಂಬ ಆರು ದಶಕಗಳಿಂದ ಮಣ್ಣಿನ ಗಣಪನಿಗೆ ಪ್ರಾಶಸ್ತ್ಯವನ್ನು ಕೊಟ್ಟಿದ್ದು, ನಮಗೆ ಎಷ್ಟೇ ಶ್ರಮವಾದರೂ ಕೂಡ ನಾವು ಮಣ್ಣಿನ ಗಣಪನನ್ನೇ ತಯಾರಿಸುತ್ತೇವೆ ಎನ್ನುತ್ತಿದ್ದಾರೆ.
ಹೌದು, ಬೆಳಗಾವಿಯ ಕಪಿಲೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ಶ್ರೀ ಗಣೇಶ ಚಿತ್ರಕಲಾದ ಮಾಲೀಕ 70 ವರ್ಷದ ಮಾರುತಿ ಜ್ಯೋತಿಬಾ ಕುಂಬಾರ ತಮ್ಮ ಇಳಿ ವಯಸ್ಸಿನಲ್ಲೂ ಶ್ರದ್ಧೆಯಿಂದ ಮೂರ್ತಿ ತಯಾರಿಸುವ ಕಾಯಕದಲ್ಲಿ ತೊಡಗಿದ್ದಾರೆ. 1962ರಿಂದ ಬೆಳಗಾವಿಯಲ್ಲಿ ಮಾರುತಿ ಅವರ ತಂದೆ ಜ್ಯೋತಿಬಾ ಮೂರ್ತಿ ತಯಾರಿಸಲು ಆರಂಭಿಸಿದ್ದರು. ಎರಡನೇ ತರಗತಿಗೆ ವಿದ್ಯಾಭ್ಯಾಸ ಮೊಟಕುಗೊಳಿಸಿದ ಮಾರುತಿ ತಂದೆಯ ಕಾಯಕವನ್ನೆ ಮುಂದುವರಿಸಿದರು. ಈಗ ಮಾರುತಿ, ಅವರ ಮಕ್ಕಳಾದ ಸಾಗರ, ವಿನಾಯಕ ಸೇರಿ ಐವರು ಕಾರ್ಮಿಕರೊಂದಿಗೆ ಗಣೇಶ ಮೂರ್ತಿ ತಯಾರಿಸುತ್ತಿದ್ದಾರೆ.
ಈ ಕುರಿತು ಈಟಿವಿ ಭಾರತದ ಜೊತೆ ಮಾತನಾಡಿದ ಕಲಾವಿದ ಮಾರುತಿ ಕುಂಬಾರ, ಮಣ್ಣಿನ ಗಣಪತಿ ಮಾಡುವುದು ಎಂದರೆ ನಮಗೆ ಬಲುಪ್ರೀತಿ. ಪಿಒಪಿ ಮೂರ್ತಿಗಳನ್ನು ಬಹಳ ಬೇಗನೇ ತಯಾರಿಸಬಹುದು, ಕೆಲಸವೂ ಹಗುರವೇ. ಆದರೆ, ಅವುಗಳಿಂದ ಬಹಳಷ್ಟು ಪರಿಸರ ಮಾಲಿನ್ಯ ಉಂಟಾಗುತ್ತದೆ. ಖಾನಾಪುರ ಅರಣ್ಯ ಪ್ರದೇಶದಿಂದ ಜೇಡಿ ಮಣ್ಣು ತಂದು ಮಣ್ಣಿನ ಮೂರ್ತಿ ಮಾಡುತ್ತೇವೆ. ಐದು ತಿಂಗಳು ಮೊದಲೇ ಸಿದ್ಧತೆ ಮಾಡಿಕೊಳ್ಳುತ್ತೇವೆ. ಇನ್ನು 1 ರಿಂದ 5 ಅಡಿಯವರೆಗೆ ಮನೆ ಗಣಪತಿ ಮಾಡುತ್ತಿದ್ದು, ಇವುಗಳ ಬೆಲೆ 2 ಸಾವಿರದಿಂದ 8 ಸಾವಿರ ರೂ. ಇದೆ. 5 ರಿಂದ 12 ಅಡಿ ಸಾರ್ವಜನಿಕ ಮೂರ್ತಿಗಳಿದ್ದು, ಇವುಗಳಿಗೆ 12 ಸಾವಿರದಿಂದ 1 ಲಕ್ಷ ರೂ. ವರೆಗೆ ದರವಿದೆ. ಈ ಬಾರಿ 400ಕ್ಕೂ ಹೆಚ್ಚು ಮೂರ್ತಿ ತಯಾರಿಸಿದ್ದೇವೆ. ನಮ್ಮಲ್ಲಿ ಬರುವ ಎಲ್ಲರೂ ಮಣ್ಣಿನ ಮೂರ್ತಿಗಳಿಗೆ ಬೇಡಿಕೆ ಇಡುತ್ತಾರೆ ಎಂದರು.
ಸೆ.19ಕ್ಕೆ ಗಣೇಶೋತ್ಸವ ಹಿನ್ನೆಲೆಯಲ್ಲಿ ಮೂರ್ತಿ ತಯಾರಿಕೆ ಭರದಿಂದ ಸಾಗಿದ್ದು, ಈಗಾಗಲೇ ಬಹುತೇಕ ಮೂರ್ತಿ ತಯಾರಿಕೆ ಪೂರ್ಣವಾಗಿ ಬಣ್ಣದ ಕೆಲಸ ನಡೆಯುತ್ತಿದೆ. ಮೂರ್ತಿ ತಯಾರಕರು ವಿಘ್ನನಿವಾರಕನಿಗೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ. ದಗಡುಶೇಟ, ಲಾಲಬಾಗಚಾ ರಾಜಾ, ಚಿಂತಾಮಣಿ, ಸಿಂಹಾಸನಾರೂಢ, ಗಜಮುಖ, ಶಿವನ ಅವತಾರ, ರಾಧಾಕೃಷ್ಣ, ಕಮಲದಲ್ಲಿ ಪಾರ್ವತಿಯ ತೊಡೆಯ ಮೇಲೆ ಕುಳಿತಿರುವ ಗಣಪ ಸೇರಿ ಮತ್ತಿತರ ಶೈಲಿಯ ಮಣ್ಣಿನ ಮೂರ್ತಿಗಳು ಕಲಾವಿದರ ಕುಂಚದಿಂದ ಅರಳಿದ್ದು, ಮೂರ್ತಿಕಾರರ ಕೈಚಳಕ ಎದ್ದು ಕಾಣುತ್ತಿದೆ.