ಬೆಳಗಾವಿ:ಗಡಿ ಜಿಲ್ಲೆ ಬೆಳಗಾವಿಯಲ್ಲಿ ಇಂದು ಸಾರ್ವಜನಿಕ ಅದ್ಧೂರಿಯಾಗಿ ಗಣೇಶ ಮೂರ್ತಿಗಳ ನಿಮಜ್ಜನ ಮೆರವಣಿಗೆ ನಡೆಯಲಿದೆ. ಇದಕ್ಕೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ಮಹಾನಗರ ಪಾಲಿಕೆ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ. ಈ ನಿಟ್ಟಿನಲ್ಲಿಂದು ನಗರದಲ್ಲಿ ಪೊಲೀಸರು ಬುಧವಾರ ಪಥ ಸಂಚಲನ ನಡೆಸಿದರು. ನಗರ ಪೊಲೀಸ್ ಆಯುಕ್ತ ಎಸ್ ಎನ್ ಸಿದ್ದರಾಮಪ್ಪ ಅವರ ನೇತೃತ್ವದಲ್ಲಿ ನಗರದ ಚನ್ನಮ್ಮ ವೃತ್ತದಿಂದ ಆರಂಭವಾದ ಪಥ ಸಂಚಲನ ಶನಿವಾರ ಕೂಟ, ಗಣಪತಿ ಗಲ್ಲಿ, ಕಂಬಳಿಕೂಟ, ಮಾರುತಿ ಗಲ್ಲಿ, ಸಮಾದೇವಿ ಮಂದಿರ, ಎಂಡೆಕೂಟ, ಧರ್ಮವೀರ ಸಂಭಾಜಿವೃತ್ತ, ರಾಮಲಿಂಗಖಿಂಡ ಗಲ್ಲಿ, ಶನಿಮಂದಿರ, ಕಪಿಲೇಶ್ವರ ಮೇಲ್ಸೇತುವೆ ಸೇರಿ ಪ್ರಮುಖ ರಸ್ತೆಗಳಲ್ಲಿ ಜರುಗಿತು.
ನಗರ, ಜಿಲ್ಲೆ, ಹೊರ ಜಿಲ್ಲೆಗಳಿಂದಲೂ ಆಗಮಿಸಿದ್ದ ಪೊಲೀಸರು ಶಿಸ್ತಿನಿಂದ ಹೆಜ್ಜೆ ಹಾಕಿದರು. ರ‍್ಯಾಪಿಡ್ ಆಕ್ಷನ್ ಫೋರ್ಸ್ ಸಿಬ್ಬಂದಿ ಪಥ ಸಂಚಲನದಲ್ಲಿ ಭಾಗವಹಿಸುವ ಮೂಲಕ ಎಲ್ಲರ ಗಮನ ಸೆಳೆದರು. ಈ ಮೂಲಕ ಶಾಂತಿಗೆ ಭಂಗ ತಂದರೆ ಹುಷಾರ್ ಎಂಬ ಎಚ್ಚರಿಕೆಯನ್ನು ಪೊಲೀಸರು ನೀಡಿದರು. ಡಿಸಿಪಿ ಪಿ.ವ್ಹಿ.ಸ್ನೇಹಾ, ಡಿಸಿಪಿ ರೋಹನ್ ಜಗದೀಶ ಸೇರಿ ಹಿರಿಯ ಅಧಿಕಾರಿಗಳು ಪಥ ಸಂಚಲನದಲ್ಲಿ ಭಾಗವಹಿಸಿದ್ದರು.