ಬೆಳಗಾವಿ:ಜಿಲ್ಲೆಯಲ್ಲಿ66ನೇ ಕರ್ನಾಟಕ ರಾಜ್ಯೋತ್ಸವ ಸಂಭ್ರಮ ಸಂಜೆಯಾಗುತ್ತಿದ್ದಂತೆ ಇಮ್ಮಡಿಗೊಂಡಿದೆ. ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾವಣೆಗೊಂಡಿದ್ದಾರೆ. ಜಯಘೋಷ ಕೂಗುತ್ತಾ ಗುಂಪು ಗುಂಪಾಗಿ ನಿಂತಿದ್ದ ಜನರನ್ನು ಪೊಲೀಸರು ಲಾಠಿ ಬೀಸಿ ಚದುರಿಸಿದರು.
ರಾಜ್ಯೋತ್ಸವಕ್ಕೆ ಸಹಸ್ರಾರು ಜನ ಜಮಾವಣೆ ರಾಜ್ಯೋತ್ಸವ 'ಅಪ್ಪು'ಮಯ:
ಪುನೀತ್ ರಾಜ್‍ಕುಮಾರ್ ನಿಧನದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಅವರ ಅಭಿಮಾನಿಗಳು ವಿಭಿನ್ನವಾಗಿ ಶ್ರದ್ಧಾಂಜಲಿ ಸಲ್ಲಿಸಿದರು. ಓರ್ವ ಅಭಿಮಾನಿ ಬೈಕ್ ಹಿಂಬದಿಯಲ್ಲಿ ಪುನೀತ್ ಭಾವಚಿತ್ರ ಕಟ್ಟಿಕೊಂಡು ಬಂದು ಗಮನ ಸೆಳೆದನು. ಪುನೀತ್ ರಾಜ್‍ಕುಮಾರ್ ಭಾವಚಿತ್ರದ ಮೇಲೆ ಭಾವಪೂರ್ಣ ಶ್ರದ್ಧಾಂಜಲಿ ಎಂದು ಬರೆದು, ಬೈಕ್ ಮುಂಭಾಗದಲ್ಲಿ ಕೆಂಪು ಹಳದಿ ಹೂವಿನಿಂದ ಸಿಂಗರಿಸಿ, ಕನ್ನಡದ ಬಾವುಟ ಕಟ್ಟಿ ಕನ್ನಡಾಭಿಮಾನಿ ಸವಾರಿ ಮಾಡಿದರು. ಅಪ್ಪು ಅವರ ಅಭಿಮಾನಿ ಮಾರುತಿ ತನ್ನ ಬೈಕ್ ಅನ್ನು ವಿಶಿಷ್ಟವಾಗಿ ಸಿಂಗರಿಸಿದ್ದರು.
ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಸೇರಿದ ನೂರಾರು ಯುವಕರು ಕೈಯಲ್ಲಿ ಕನ್ನಡ ಧ್ವಜ, ಕೊರಳಲ್ಲಿ ಕನ್ನಡ ಶಾಲು ಹಾಕಿಕೊಂಡು ಪುನೀತ್ ರಾಜಕುಮಾರ್ ಪರ ಅಪ್ಪು.. ಅಪ್ಪು.. ಎಂದು ಘೋಷಣೆ ಕೂಗಿದರು.
ಕನ್ನಡರಾಜ್ಯೋತ್ಸವ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಬಸ್ ಮುಂಭಾಗದಲ್ಲಿ ಪುನೀತ್ ರಾಜಕುಮಾರ್ ಭಾವಚಿತ್ರ ಅಳವಡಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬಸ್ ಗೆ ಕನ್ನಡ ಬಾವುಟ ಕಟ್ಟಿ, ಕೆಂಪು ಹಳದಿ ಬಲೂನ್ ಹಾಕಿ ಸಿಂಗರಿಸಲಾಗಿತ್ತು. ನಿರ್ವಾಹಕ ಬಸವರಾಜ ಮೆಳವಂಕಿ ಮತ್ತು ಪ್ರಯಾಣಿಕರು ಸೇರಿ ಬಸ್ ಅನ್ನು ವಿಶೇಷವಾಗಿ ಸಿಂಗಾರ ಮಾಡಲಾಗಿತ್ತು.