ಬೆಳಗಾವಿ:ಜಿಲ್ಲೆಯ ಗೋಕಾಕ್‌ನಲ್ಲಿಂದು ನಡೆಯುವ ಪಂಚಮಸಾಲಿ ಬೃಹತ್ ಸಮಾವೇಶದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಿರುದ್ಧ ಮಾತನಾಡಿದರೆ ಪ್ರತಿಭಟನೆ ಮಾಡುವುದಾಗಿ ಸತೀಶ್ ಬೆಂಬಲಿಗರು ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಗೋಕಾಕ್ ನಗರದಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಬೃಹತ್ ಸಮಾವೇಶ ನಡೆಯುತ್ತಿದೆ. ಬೆಳಗಾವಿ ಎಸ್ಪಿ ಡಾ.ಸಂಜೀವ್ ಪಾಟೀಲ ನೇತೃತ್ವದಲ್ಲಿ ಐವರು ಡಿವೈಎಸ್‌ಪಿಗಳು, 12 ಸಿಪಿಐಗಳು, 20 ಪಿಎಸ್ಐಗಳು, 31 ಎಸ್ಐ ಹಾಗೂ 400ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ. ಇದಲ್ಲದೇ ಎರಡು ಕೆಎಸ್‌ಆರ್‌ಪಿ ಹಾಗೂ ಎರಡು ಡಿಎಆರ್ ತುಕಡಿಗಳಿವೆ.
ಗೋಕಾಕ್‌ನ ನ್ಯೂ ಇಂಗ್ಲಿಷ್ ಶಾಲೆಯ ಆವರಣದಲ್ಲಿ ಸಮಾವೇಶ ಆಯೋಜನೆ ಮಾಡಲಾಗಿದೆ. ಸಮಾವೇಶಕ್ಕೂ ಮುನ್ನ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಬೃಹತ್ ರ‍್ಯಾಲಿ ನಡೆಯಲಿದೆ. ಮಧ್ಯಾಹ್ನ ಒಂದು ಗಂಟೆಗೆ ಸಂಗೊಳ್ಳಿ ರಾಯಣ್ಣ ವೃತ್ತದಿಂದ ರ‍್ಯಾಲಿ ಆರಂಭವಾಗಲಿದ್ದು ಮಧ್ಯಾಹ್ನ 3 ಗಂಟೆಗೆ ಲಿಂಗಾಯತ ಪಂಚಮಸಾಲಿ ಸಮಾವೇಶ ನಡೆಯಲಿದೆ.