ಬೆಳಗಾವಿ ಮಹಿಳೆ ರಕ್ಷಣೆಗೆ ಯತ್ನಿಸಿದ ಮೂವರಿಗೆ ಸನ್ಮಾನ, ನಗದು ಬಹುಮಾನ ಬೆಳಗಾವಿ: ಬೆಳಗಾವಿ ತಾಲೂಕಿನ ಗ್ರಾಮವೊಂದರಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿ, ಕಂಬಕ್ಕೆ ಕಟ್ಟಿ ಥಳಿಸಿದ ಅಮಾನವೀಯ ಘಟನೆಯನ್ನು ತಡೆಯಲು ಯತ್ನಿಸಿದ್ದ ಮತ್ತು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದ ಗ್ರಾಮದ ಮೂವರಿಗೆ ಪೊಲೀಸ್ ಆಯುಕ್ತಾಲಯದಿಂದ ಸತ್ಕಾರ ಮಾಡಲಾಯಿತು.
ಗ್ರಾಮದ ನಿವಾಸಿಗಳಾದ ಜಹಾಂಗೀರ್ ತಹಶೀಲ್ದಾರ್, ವಾಸೀಮ್ ಮಕಾನದಾರ್ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ದಪ್ಪ ಹೊಳಿಕಾರ್ ಅವರಿಗೆ ತಲಾ ಐದು ಸಾವಿರ ರೂ. ನಗದು ಬಹುಮಾನ ನೀಡಿ ನಗರ ಪೊಲೀಸ್ ಆಯುಕ್ತ ಎಸ್.ಎನ್. ಸಿದ್ದರಾಮಪ್ಪ ಗೌರವಿಸಿದರು. ಇದೇ ವೇಳೆ ಜಹಾಂಗೀರ್ ಅವರಿಗೆ ಹೈಕೋರ್ಟ್ ನೀಡಿದ್ದ ಪ್ರಶಂಸನೀಯ ಪತ್ರವನ್ನು ನೀಡಿ ಅಭಿನಂದಿಸಲಾಯಿತು. ಕಾಕತಿ ಠಾಣೆಯ ಪಿಎಸ್ಐ ಮಂಜುನಾಥ್ ಹುಲಕುಂದ ಸೇರಿ ಆರು ಜನ ಸಿಬ್ಬಂದಿಯನ್ನೂ ಸನ್ಮಾನಿಸಲಾಗಿದೆ.
ಈ ವೇಳೆ ನಗರ ಪೊಲೀಸ್ ಆಯುಕ್ತ ಎಸ್.ಎನ್. ಸಿದ್ದರಾಮಪ್ಪ ಮಾತನಾಡಿ, "ಆ ಗ್ರಾಮದ ಮೂರು ಜನ ಸಾರ್ವಜನಿಕರಿಗೆ ಸನ್ಮಾನ ಮಾಡಿದ್ದೇವೆ. ಕೋರ್ಟ್ ಕಡೆಯಿಂದ ಪ್ರಶಂಸನೀಯ ಪತ್ರ ಕೂಡ ನೀಡಿ ಗೌರವಿಸಿದ್ದೇವೆ. ಕಾಕತಿ ಠಾಣೆ ಪಿಎಸ್ಐ ಸೇರಿ ಆರು ಜನರಿಗೆ ಸನ್ಮಾನ ಮಾಡಿದ್ದೇವೆ. ಪಿಎಸ್ಐಗೆ ಐದು ಸಾವಿರ ರೂಪಾಯಿ ನಗದು, ಉಳಿದ ಐದು ಜನ ಸಿಬ್ಬಂದಿಗೆ ನಾಲ್ಕು ಸಾವಿರ ರೂಪಾಯಿ ನಗದು ಬಹುಮಾನ ನೀಡಿದ್ದೇವೆ. ಮಾಹಿತಿ ನೀಡಿದ್ದ ಮೂರು ಜನ ಸಾರ್ವಜನಿಕರಿಗೆ ಎನೂ ಆಗದಂತೆ ರಕ್ಷಣೆ ನೀಡಲಾಗುವುದು. ಘಟನೆ ನಡೆದಾಗ ಭಯಪಡದೇ ಪೊಲೀಸರಿಗೆ ಸಾರ್ವಜನಿಕರು ಮಾಹಿತಿ ನೀಡುವಂತೆ ಸಿದ್ದರಾಮಪ್ಪ ಕೋರಿದರು. ಈ ವೇಳೆ ಡಿಸಿಪಿ ಪಿ.ವಿ. ಸ್ನೇಹಾ ಸೇರಿ ಮತ್ತಿತರರು ಇದ್ದರು.
ಇದನ್ನೂ ಓದಿ:ಬೆಳಗಾವಿ ಮಹಿಳೆಯ ವಿವಸ್ತ್ರಗೊಳಿಸಿ, ಹಲ್ಲೆ ಪ್ರಕರಣ: ರಾಜ್ಯ ಸರ್ಕಾರ, ಡಿಜಿಪಿಗೆ ಎನ್ಹೆಚ್ಆರ್ಸಿ ನೋಟಿಸ್