ಬೆಳಗಾವಿ:''ಚಿಕ್ಕೋಡಿ ತಾಲೂಕಿನ ಹಿರೇಕೋಡಿಯ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣ ಸಿಬಿಐಗೆ ವಹಿಸುವಂಥ ಸಂದರ್ಭವಿಲ್ಲ, ಅದರ ಅವಶ್ಯಕತೆಯೂ ಇಲ್ಲ'' ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಸ್ಪಷ್ಟಪಡಿಸಿದ್ದಾರೆ. ಬೆಳಗಾವಿ ತಾಲೂಕಿನ ಹಲಗಾ ಜೈನ ಬಸದಿಗೆ ಭೇಟಿ ನೀಡಿದ ಅವರು, ಇಲ್ಲಿನ ಬಾಲಾಚಾರ್ಯ ಸಿದ್ಧಸೇನ ಮುನಿ ಮಹಾರಾಜರೊಂದಿಗೆ ಮಾತುಕತೆ ನಡೆಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು.
ಹಿರೇಕೋಡಿ ಮುನಿ ಮಹಾರಾಜರ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಬಿಜೆಪಿ ಒತ್ತಡ ಹೇರುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ''ನೀವು ಸರ್ಕಾರ ನಡೆಸುವಾಗ ಪೊಲೀಸ್ ಇಲಾಖೆ ಚೆನ್ನಾಗಿ ಇತ್ತು. ಇಲಾಖೆ ಮೇಲೆ ನಂಬಿಕೆಯಿತ್ತು. ಒಂದೂವರೆ ತಿಂಗಳಲ್ಲಿ ಎಲ್ಲವೂ ಬದಲಾಗಿ ಹೋಗುತ್ತದೆಯಾ? ಪೊಲೀಸ್ ಇಲಾಖೆ ಮೇಲೆ ಹಿಂದೆ ಇದ್ದ ನಂಬಿಕೆ ಈಗ ಏಕೆ ಇಲ್ಲ'' ಎಂದು ಪ್ರಶ್ನಿಸಿದರು. ಘಟನೆ ನಡೆದು ಕೆಲವೇ ಗಂಟೆಗಳಲ್ಲಿ ಆರೋಪಿಗಳ ಬಂಧನ ಮಾಡಲಾಗಿದೆ. ಎಲ್ಲದರಲ್ಲೂ ರಾಜಕೀಯ ಮಾಡಿದ್ರೆ ಚನ್ನಾಗಿ ಕಾಣೋದಿಲ್ಲ. ಈಗ ಸಿಬಿಐಗೆ ವಹಿಸುವ ಯಾವುದೇ ಸಂದರ್ಭ ಮತ್ತು ಅವಶ್ಯಕತೆ ಇಲ್ಲ'' ಎಂದು ಬಿಜೆಪಿಗೆ ತಿರುಗೇಟು ನೀಡಿದರು.
''ಇಂತಹ ಘಟನೆ ನಡೆಯಬಾರದಿತ್ತು. ಸ್ವಾಮೀಜಿ ಭೀಕರ ಹತ್ಯೆ ನಮಗೆಲ್ಲಾ ನೋವು ತಂದಿದೆ. ಪೊಲೀಸರಿಂದ ಆರೋಪಿಗಳನ್ನು ಬಂಧಿಸಲಾಗಿದೆ. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದೆ. ಎಲ್ಲ ರೀತಿಯ ಕ್ರಮಕೈಗೊಳ್ಳಲು ಸರ್ಕಾರ ಸಿದ್ದವಿದೆ'' ಎಂದರು. ''ಇನ್ನು ಹುಬ್ಬಳ್ಳಿಗೆ ಭೇಟಿ ನೀಡಿದ ವೇಳೆ ಮಾತನಾಡಿದ ಗೃಹ ಸಚಿವರು, ಪಾದಯಾತ್ರೆ ಸಂದರ್ಭದಲ್ಲಿ ಶಾಲೆ, ಕಾಲೇಜಿನಲ್ಲಿ ತಂಗಲು ಅನುಮತಿ, ಪೊಲೀಸ್ ಬಂದೋಬಸ್ತ್ ನೀಡಬೇಕು. ಜೈನ ಸಮುದಾಯಕ್ಕೆ ಮಂಡಳಿ ಸ್ಥಾಪನೆ ಮಾಡಬೇಕು ಎಂಬುದು ಶ್ರೀಗಳ ಬೇಡಿಕೆಯಾಗಿದೆ. ಈ ಮೂರು ಬೇಡಿಕೆಗಳಿಗೆ ಸ್ಪಂದಿಸಿದ್ದೇನೆ. ಮುಖ್ಯಮಂತ್ರಿ ಹಾಗೂ ಸರ್ಕಾರದ ಪರವಾಗಿ ಅವರಿಗೆ ಭರವಸೆ ನೀಡಿದ್ದೇನೆ. ಚಿಕ್ಕೋಡಿಯ ಸ್ಥಳಕ್ಕೆ ಭೇಟಿ ನೀಡುತ್ತೇನೆ. ರಾಜ್ಯದಲ್ಲಿ ಶಾಂತಿ ಕಾಪಾಡಲು ಸರ್ಕಾರ ಬದ್ಧವಾಗಿದೆ'' ಎಂದು ಅಭಯ ನೀಡಿದರು.
''ಹಣಕಾಸಿನ ವಿಚಾರಕ್ಕೆ ಹತ್ಯೆ ನಡೆದಿದೆ ಎಂಬುದರ ಬಗ್ಗೆ ಮಾಧ್ಯಮಗಳಲ್ಲಿ ಬರುತ್ತಿದೆ. ಹತ್ಯೆ ಪ್ರಕರಣಕ್ಕೆ ಕಾರಣ ಏನು ಎಂಬುದರ ಬಗ್ಗೆ ಸಂಪೂರ್ಣ ತನಿಖೆ ನಂತರವೇ ಗೊತ್ತಾಗಲಿದೆ. ಹೀಗಾಗಿ ಜೈನ ಸಮಾಜದ ಜೊತೆಗೆ ಸರ್ಕಾರವಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ಸರ್ಕಾರದಿಂದ ವಿಳಂಬ ಆಗುವುದಿಲ್ಲ. ನಿಮ್ಮ ನೋವೇ ನಮ್ಮ ನೋವು. ಸರ್ಕಾರವು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದು, ಪ್ರತಿಭಟನೆ ಕೈ ಬಿಡುವಂತೆ ಜೈನ ಸಮಾಜಕ್ಕೆ ಮನವಿ ಮಾಡುತ್ತೇವೆ. ಸರ್ಕಾರ ಜೈನ ಸಮಾಜ ಸೇರಿ ಎಲ್ಲ ಧರ್ಮಗಳ ಸಾಧು, ಸಂತರ ರಕ್ಷಣೆ ನಮ್ಮ ಹೊಣೆ'' ಎಂದು ಭರವಸೆ ನೀಡಿದರು.
ಸಾಧು, ಸಂತರಿಗೆ ರಕ್ಷಣೆ ಕೊಡಿ- ಬಾಲಾಚಾರ್ಯ ಸಿದ್ದಸೇನ ಮಹಾರಾಜ ಮನವಿ:''ಈಘಟನೆಯಿಂದ ಜೈನ ಸಮುದಾಯದ ಜನರಲ್ಲಿ ಭಯ ಮೂಡಿದೆ. ಸಾಧು, ಸಂತರಿಗೆ ಹೀಗಾದ್ರೇ ಮುಂದೆ ಹೇಗೆ ಅನ್ನೋ ಪ್ರಶ್ನೆ ಕಾಡುತ್ತಿದೆ. ಇನ್ಮುಂದೆ ಈ ರೀತಿ ಘಟನೆ ಆಗಬಾರದು. ತಮ್ಮ ಸರ್ಕಾರದಿಂದ ಸುರಕ್ಷತೆ ಬೇಕು. ಜೈನ ಸಮುದಾಯದ ಜೊತೆಗೆ ಸರ್ಕಾರ ಇದೆ ಎಂದು ತಾವು ಬಂದಿದ್ದೀರಿ ಎನ್ನುವುದು ತಿಳಿದಿದೆ. ಮೂರ್ನಾಲ್ಕು ತಾಸಿನಲ್ಲಿ ಪೊಲೀಸರು ಆರೋಪಿಗಳನ್ನು ಬಂಧನ ಮಾಡಿದ್ದಾರೆ. ಪೊಲೀಸ್ ಇಲಾಖೆ ಬಹಳ ಚೆನ್ನಾಗಿ ಕೆಲಸ ಮಾಡಿದೆ. ಜೈನ ಸಮುದಾಯದ ವತಿಯಿಂದ ಅಭಿನಂದಿಸುತ್ತೇವೆ.