ಬೆಳಗಾವಿ:ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡ ಡಿಸಿಸಿ ಬ್ಯಾಂಕ್ ಕಳ್ಳತನ ಪ್ರಕರಣ ಸಂಬಂಧ ಮುರಗೋಡ ಪೊಲೀಸರು ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ.
ಆರೋಪಿಗಳಿಂದ ವಶ ಪಡಿಸಿಕೊಂಡಿರುವ ಸ್ವತ್ತು ರಾಮದುರ್ಗ ತಾಲೂಕಿನ ತೋರನಗಟ್ಟಿ ಗ್ರಾಮದ ಬಸವರಾಜ ಹುಣಶಿಕಟ್ಟಿ (30), ಯರಗಟ್ಟಿ ಗ್ರಾಮದ ಸಂತೋಷ ಕಂಬಾರ(31) ಹಾಗೂ ಸವದತ್ತಿ ತಾಲೂಕಿನ ಜೀವಾಪೂರ ಗ್ರಾಮದ ಗಿರೀಶ ಬೆಳವಲ(26) ಬಂಧಿತ ಆರೋಪಿಗಳು. ಬಂಧಿತರಿಂದ 4.37ಕೋಟಿ ನಗದು,1.63 ಕೋಟಿ ಮೌಲ್ಯದ ಚಿನ್ನಾಭರಣ ಸೇರಿದಂತೆ ಒಟ್ಟು 6 ಕೋಟಿ ಮೌಲ್ಯದ ಸ್ವತ್ತನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಒಂದೇ ವಾರದಲ್ಲಿ ಖದೀಮರು ಅರೆಸ್ಟ್:ಮಾರ್ಚ್6ರಂದು ಮುರಗೋಡ ಡಿಸಿಸಿ ಬ್ಯಾಂಕ್ನಲ್ಲಿ ಕಳ್ಳತನ ನಡೆದಿತ್ತು. ಈ ಸಂಬಂಧ ಬ್ಯಾಂಕ್ ಮ್ಯಾನೇಜರ್ ಕೃಷ್ಣಪ್ಪ ಯಲಿಗಾರ ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು ಒಂದೇ ವಾರದಲ್ಲಿ ಖದೀಮರನ್ನು ಬಂಧಿಸಿದ್ದಾರೆ.
ಕಬ್ಬಿನ ಗದ್ದೆಯಲ್ಲಿ ಕದ್ದ ಹಣ, ಒಡವೆ ಹೂತಿಟ್ಟಿದ್ದ ಭೂಪ:ಬಂಧಿತ ಆರೋಪಿ ಬಸವರಾಜ ಹುಣಶಿಕಟ್ಟಿ ಡಿಸಿಸಿ ಬ್ಯಾಂಕ್ನಲ್ಲಿ ಕ್ಲರ್ಕ್ ಕಮ್ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದನು. ಈತ ತನ್ನ ಇಬ್ಬರು ಸ್ನೇಹಿತರ ಜೊತೆಗೂಡಿ ನಕಲಿ ಕೀ ಬಳಸಿ ಬ್ಯಾಂಕ್ ಕಳ್ಳತನ ಮಾಡಿ 4.37ಕೋಟಿ ಹಣ,1.63ಕೋಟಿ ಮೌಲ್ಯದ ಚಿನ್ನಾಭರಣ ಕದ್ದುಕೊಂಡು ಪರಾರಿಯಾಗಿದ್ದನು. ಕದ್ದ ಹಣ, ಒಡವೆಗಳನ್ನು ರಾಮದುರ್ಗ ತಾಲೂಕಿನ ತೋರನಗಟ್ಟಿ ಗ್ರಾಮದ ತನ್ನ ಕಬ್ಬಿನ ಗದ್ದೆಯಲ್ಲಿ ಆರು ಅಡಿ ಆಳ ತೆಗೆದು ಹೂತಿಟ್ಟಿದ್ದನು.
ತನಿಖೆಯಲ್ಲಿ ಸತ್ಯ ಬಯಲು:ಇತ್ತ ಪ್ರಕರಣ ಬೆಳಕಿಗೆ ಬಂದ ನಂತರ ಬ್ಯಾಂಕ್ ಸಿಬ್ಬಂದಿಯನ್ನು ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದರು. ಈ ವೇಳೆ ಗೆಳೆಯರೊಂದಿಗೆ ಸೇರಿಕೊಂಡು ಕಳ್ಳತನ ಮಾಡಿರುವುದಾಗಿ ಆರೋಪಿ ಬಾಯ್ಬಿಟ್ಟಿದ್ದಲ್ಲದೇ ಕದ್ದು ಹೂತಿಟ್ಟಿದ್ದ ಸ್ಥಳದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದನು. ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ತೆರಳಿ ಹಣವನ್ನು ಜಪ್ತಿ ಮಾಡಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಮುರಗೋಡ ಡಿಸಿಸಿ ಬ್ಯಾಂಕ್ ಶಾಖೆಗೆ ಕನ್ನ: 4.41 ಕೋಟಿ ನಗದು, 1.5 ಕೋಟಿ ಮೌಲ್ಯದ ಚಿನ್ನಾಭರಣ ಕಳ್ಳತನ