ಕರ್ನಾಟಕ

karnataka

ETV Bharat / state

ಸಂಸತ್ ಭದ್ರತಾ ಲೋಪ: ಪಿಎಂ‌ ಮೋದಿ, ಅಮಿತ್ ಷಾ ಒಂದು ಮಾತೂ ಆಡಿಲ್ಲ; ಪರಮೇಶ್ವರ್​ ವಾಗ್ದಾಳಿ

G Parameshawar comment on Modi and Amith Shah: ಕೇಂದ್ರದ ಗೃಹ ಸಚಿವ ಹಾಗೂ ಪ್ರಧಾನಿ ಮೋದಿ ಪಾರ್ಲಿಮೆಂಟ್​ನಲ್ಲಿ ಆಗಿರುವ ಭದ್ರತಾ ಲೋಪದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೇ ಇರುವುದು ಆಶ್ಚರ್ಯಕರವಾಗಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್​ ಹೇಳಿದ್ದಾರೆ.

Home Minister Dr G Parameshwar
ಗೃಹ ಸಚಿವ ಡಾ ಜಿ ಪರಮೇಶ್ವರ್​

By ETV Bharat Karnataka Team

Published : Dec 14, 2023, 5:50 PM IST

Updated : Dec 14, 2023, 7:30 PM IST

ಗೃಹ ಸಚಿವ ಡಾ ಜಿ ಪರಮೇಶ್ವರ್​

ಬೆಳಗಾವಿ: ಸಂಸತ್ತಿನ ಇತಿಹಾಸದಲ್ಲಿ ಆಗದೇ ಇರುವ ಭದ್ರತಾ ಲೋಪವನ್ನು ಇಡೀ ವಿಶ್ವವೇ ನೋಡಿದೆ. ಈ ಬಗ್ಗೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಷಾ ಹೇಳಿಕೆ ನೀಡದೇ ಇರುವುದು ಆಶ್ಚರ್ಯವಾಗಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್​ ಕಿಡಿಕಾರಿದ್ದಾರೆ.

ಇಂದು ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, "ಹೊಸದಾಗಿ ಸಂಸತ್ ನಿರ್ಮಿಸಿದ್ದೇವೆ. ವ್ಯವಸ್ಥಿತ ಹಾಗೂ ವೈಜ್ಞಾನಿಕವಾಗಿ ಮಾಡಿದ್ದೇವೆ ಎಂದು ಹೇಳುವಾಗ ಇಬ್ಬರು ಯುವಕರು ಗ್ಯಾಲರಿಗೆ ಬಂದು, ಅಲ್ಲಿಂದ ಜಿಗಿದು ನೇರವಾಗಿ ಸದನದ ಒಳಗೆ ಬರುತ್ತಾರೆ ಎಂದರೆ ಹೇಗೆ..? ಇದನ್ನು ಯಾರೂ ನಂಬಲು ಸಾಧ್ಯವಿಲ್ಲ. ವಿಶೇಷವಾಗಿ ನಮ್ಮ ರಾಜ್ಯದ ಸಂಸದರಾದ ಪ್ರತಾಪ್ ಸಿಂಹ್ ಪಾಸ್​ಗಳನ್ನು ಕೊಟ್ಟಿದಾರೆ ಎಂದು ಗೊತ್ತಾಗಿದೆ. ಅವರಿಗೆ ಪರಿಚಯ ಇದ್ದ ಯುವಕರಿಗೆ ಪಾಸ್​ಗಳನ್ನು ಕೊಟ್ಟಿದ್ದಾರೆ. ಹೀಗಾಗಿ ಅವರೂ ಸಹ ಇದಕ್ಕೆ ಹೊಣೆಯಾಗುತ್ತಾರೆ. ಅವರನ್ನೂ‌ ಕೂಡ ಸಂಸತ್ ಸ್ಥಾನದಿಂದ‌‌ ಅಮಾನತು ಮಾಡುವಂತೆ ನಮ್ಮ ಕಾಂಗ್ರೆಸ್ ಪಕ್ಷ ಹಾಗೂ ಬೇರೆ ಪಕ್ಷದವರೂ ಆಗ್ರಹಿಸಿದ್ದಾರೆ" ಎಂದರು.

"ಇನ್ನು ಆಶ್ಚರ್ಯ ಎಂದರೆ ಈ ಬಗ್ಗೆ ಕೇಂದ್ರದ ಗೃಹಮಂತ್ರಿಗಳಾಗಲಿ, ಪ್ರಧಾನಮಂತ್ರಿಗಳಾಗಲಿ ತುಟಿ ಪಿಟಿಕ್ ಎಂದಿಲ್ಲ. ಅಲ್ಲದೇ ವಿಷಾದವನ್ನೂ ವ್ಯಕ್ತಪಡಿಸಿಲ್ಲ. ಮುಂದೆ ಇಂತಹ ಘಟನೆ ಆಗೋದಿಲ್ಲ, ಆಗೋದಕ್ಕೆ ಬಿಡಲ್ಲ ಅಂತ‌ ಹೇಳಿ ಒಂದು ಹೇಳಿಕೆಯನ್ನೂ ಸಹ ಕೊಟ್ಟಿಲ್ಲ. ಈ ಬಗ್ಗೆ ನಮ್ಮ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈಗಾಗಲೇ ಪ್ರಸ್ತಾಪ ಮಾಡಿದ್ದಾರೆ. ನಾವೆಲ್ಲರೂ ಸಹ ಅದಕ್ಕೆ ಬೆಂಬಲ ಸೂಚಿಸಿದ್ದೇವೆ" ಎಂದು ಪರಮೇಶ್ವರ ಹೇಳಿದರು.

"ಬೆಳಗಾವಿ ಸುವರ್ಣ ವಿಧಾನಸೌಧದ ಅಧಿವೇಶನದಲ್ಲೂ ಇಂತಹ ಲೋಪ ಆಗದಂತೆ ಕ್ರಮ ವಹಿಸಲು ಸೂಚನೆ ನೀಡಿದ್ದೇನೆ. ಅಧಿವೇಶನದ ಒಳಾಂಗಣ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶ ಸ್ಪೀಕರ್ ವ್ಯಾಪ್ತಿಗೆ ಬರುತ್ತದೆ. ಸ್ಪೀಕರ್ ಹಾಗೂ ಸಭಾಪತಿ‌ ಬಳಿಯೂ ಈ ಬಗ್ಗೆ ಮಾತನಾಡಿ, ಇಂತಹ ಕರ್ತವ್ಯ ಲೋಪ ಆಗದ ಹಾಗೆ ಎಚ್ಚರಿಕೆ ವಹಿಸಿದ್ದೇವೆ" ಎಂದರು

"ಸಂಸತ್ತಿನ ಲೋಪದೋಷದ ಬಗ್ಗೆ ಕೇಂದ್ರದ ಗೃಹ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ತನಿಖೆ ಮಾಡುತ್ತಾರೆ. ಒಂದು ವೇಳೆ ರಾಜ್ಯ‌ ಸರ್ಕಾರ, ರಾಜ್ಯದ ಪೊಲೀಸರ ಸಹಾಯ ಕೇಳಿದರೆ ಅದಕ್ಕೆ ನಾವು ಸಿದ್ಧರಿದ್ದೇವೆ. ಬೆಂಗಳೂರಿನ ವಿಧಾನಸೌಧದಲ್ಲೂ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳುತ್ತೇವೆ. ಇನ್ನು ತಂತ್ರಜ್ಞಾನದ ಅವಶ್ಯಕತೆ ಕಂಡು ಬಂದರೆ ಅದನ್ನೂ ಸಹ ಬಳಸಿಕೊಳ್ಳುತ್ತೇವೆ" ಎಂದು ಹೇಳಿದರು.

"ಬಿಜೆಪಿಯವರು ಸದನದೊಳಗೆಯೂ ಗಲಾಟೆ ಮಾಡಿ ಕಾಲಹರಣ‌ ಮಾಡುತ್ತಿದ್ದಾರೆ. ನಿನ್ನೆ ಸದನ ನಡೆಯೋ ಸಂದರ್ಭದಲ್ಲೂ ಹೊರಗಡೆಯೂ ಅದನ್ನೇ ಮಾಡಿದ್ದಾರೆ. ಬೇರೆ ಸಂದರ್ಭದಲ್ಲಿ ನೀವು ರಾಜಕೀಯ ಮಾಡಿಕೊಳ್ಳಬಹುದು. ಆದರೆ ಅಧಿವೇಶನ ನಡಿಯುತ್ತಿರುವಾಗ ಸರ್ಕಾರವನ್ನು ಪ್ರಶ್ನಿಸುವುದಕ್ಕೆ ಸದನದೊಳಗೆ ನಿಮಗೆ ಅವಕಾಶವಿದೆ. ಅದನ್ನು ಬಿಟ್ಟು ಹೊರಗಡೆ ಬಂದು ಒಳಗಡೆ ಚರ್ಚೆಯಲ್ಲಿ ಭಾಗವಹಿಸದೇ ಇರುವುದನ್ನು ನೋಡಿದರೆ ಬಿಜೆಪಿಯವರು ಉತ್ತರ ಕರ್ನಾಟಕದ ಬಗ್ಗೆ‌ ಕೇವಲ ಮೊಸಳೆ ಕಣ್ಣೀರು ಸುರಿಸುತ್ತಾರೆ ಎಂದು ಸಾಬೀತು ಆಗುತ್ತದೆ" ಎಂದು ಪರಮೇಶ್ವರ್​ ವಾಗ್ದಾಳಿ ಮಾಡಿದರು.

ಇದನ್ನೂ ಓದಿ:ಸುವರ್ಣಸೌಧದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್: ಪಾಸ್ ಇದ್ದವರಿಗೆ ಮಾತ್ರ ಪ್ರವೇಶ

Last Updated : Dec 14, 2023, 7:30 PM IST

ABOUT THE AUTHOR

...view details