ಬೆಳಗಾವಿ: ರಾಜ್ಯ ಸರ್ಕಾರ ಅಕ್ಟೋಬರ್ 1ರಿಂದ ಜಾರಿಗೆ ಬರುವಂತೆ ವೇಶನ, ಕಟ್ಟಡ, ಭೂಮಿ ಮತ್ತಿತರ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಪರಿಷ್ಕರಣೆಯಿಂದ ಜಿಲ್ಲೆಯ ಮಧ್ಯಮ ವರ್ಗ ತೊಂದರೆ ಅನುಭವಿಸುವಂತೆ ಮಾಡಿದೆ. ಅಲ್ಲದೇ ಆಸ್ತಿ ಖರೀದಿಸಲು ಜನ ಪರದಾಡುವಂತಾಗಿದೆ.
ಅಗತ್ಯ ವಸ್ತುಗಳ ಬೆಲೆ ಏರಿಕೆ, ಭೀಕರ ಬರಗಾಲದಿಂದ ಕಂಗೆಟ್ಟಿರುವ ಜನರಿಗೆ ಸರ್ಕಾರದ ಈ ನೂತನ ಮಾರ್ಗಸೂಚಿ ದರದಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸ್ವಂತ ಮನೆ ಹೊಂದಬೇಕು ಎಂಬ ಮಧ್ಯಮ ವರ್ಗ, ಕೂಲಿಕಾರರ ಕನಸು ಕನಸಾಗಿಯೇ ಉಳಿಯುವಂತೆ ಮಾಡಿದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ಬೆಳಗಾವಿ ನಗರದಲ್ಲಿ ಆಸ್ತಿ ದರ ಗಗನಕ್ಕೇರಿರುವುದರಿಂದ ಜನರು ನಗರದ ಹೊರ ವಲಯದಲ್ಲಿ ನಿವೇಶನಗಳ ಖರೀದಿಗೆ ಮನಸ್ಸು ಮಾಡುತ್ತಿದ್ದಾರೆ.
ಜಿಲ್ಲಾ ನೋಂದಣಿ ಅಧಿಕಾರಿ ಮಹಾಂತೇಶ ಪಟಾತರ ಮಾತನಾಡಿ, "ಆಸ್ತಿ ಮಾರುಕಟ್ಟೆ ಮಾರ್ಗಸೂಚಿ ದರವನ್ನು ಕೇಂದ್ರೀಯ ಮಾರುಕಟ್ಟೆ ಉಪಸಮಿತಿ ಎಲ್ಲೆಲ್ಲಿ ಹೆಚ್ಚಳ ಮಾಡಬೇಕೋ ಮಾಡಿದೆ. ಇದು ಜಿಲ್ಲಾದ್ಯಂತ ಅ.1ರಿಂದ ಜಾರಿಗೆ ಬಂದಿದೆ. ಇನ್ನು 2021-22ರ ಸಾಲಿನಲ್ಲಿ 176 ಕೋಟಿ ಟಾರ್ಗೆಟ್ ಇತ್ತು. 186 ಕೋಟಿ ತೆರಿಗೆ ಸಂಗ್ರಹವಾಗಿ, 80 ಸಾವಿರ ಆಸ್ತಿಗಳ ನೋಂದಣಿಯಾಗಿತ್ತು. ಅದೇ ರೀತಿ, 2022-23ರ ಏಪ್ರಿಲ್ ವರೆಗೆ 192 ಕೋಟಿ ತೆರಿಗೆ ಸಂಗ್ರಹವಾಗಿ, 82 ಸಾವಿರ ಆಸ್ತಿಗಳ ನೋಂದಣಿಯಾಗಿದೆ. ದಸ್ತಾವೇಜುಗಳಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿಲ್ಲ. ಸ್ವಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿವೆ" ಎಂದು ತಿಳಿಸಿದರು.